ದಾವಣಗೆರೆ : ಬರುವ ಲೋಕಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪಂಚಮಸಾಲಿ ಸಮಾಜಕ್ಕೆ ಮನ್ನಣೆ ಕೊಡಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಒತ್ತಾಯ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಮಾತನಾಡಿದ ಅವರು, ದಾವಣಗೆರೆ, ಹಾವೇರಿ, ಗದಗ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ ನಮ್ಮ ಸಮುದಾಯದ ಸಂಖ್ಯೆ ಹೆಚ್ಚಿದೆ. ಎಲ್ಲಿಯಾದರೂ ಟಿಕೆಟ್ ಕೊಟ್ಟರೆ ಉತ್ತಮ. ಒಟ್ಟು 80 ಲಕ್ಷಕ್ಕೂ ಹೆಚ್ಚು ನಮ್ಮ ಸಮಾಜದ ಜನಸಂಖ್ಯೆ ಇದೆ. ಆದರೂ ನಮಗೆ ಮಾನ್ಯತೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷಗಳು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ ಕೊಡ್ಬೇಕು. ಮತದಾರ ಸಂಖ್ಯೆ, ಜನಸಂಖ್ಯೆ ಕಡಿಮೆ ಇದ್ದರೂ ಕೆಲವರಿಗೆ ಉಪಯೋಗ ಆಗ್ತಿದೆ. ಎರಡೂ ಪಕ್ಷದವರು ಯಾವ ಕ್ಷೇತ್ರದಲ್ಲಿ ಯಾವ ವ್ಯಕ್ತಿಗೆ ಕೊಡ್ತಾರೆ ಕೊಡಲಿ. ಒಟ್ಟಾರೆ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡ್ಬೇಕು ಎಂದಿದ್ದಾರೆ. ಇನ್ನು ಕೂಡಲಸಂಗಮ ಪೀಠದ ಬಸವ ಜಯಮೃತುಂಜಯ ಶ್ರೀ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆಯುವ ಪಂಚಮಸಾಲಿ ಸಮಾಜದ ಸಮಾವೇಶದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಮಠದ ಆಡಳಿತ ಅಧಿಕಾರಿ ರಾಜಕುಮಾರ್ ಹೇಳಿದಿಷ್ಟು: ಈ ವೇಳೆ, ಮಠದ ಆಡಳಿತಾಧಿಕಾರಿ ಹೆಚ್ ಪಿ ರಾಜಕುಮಾರ್ ಅವರು ಪ್ರತಿಕ್ರಿಯಿಸಿ, ಪಂಚಮಸಾಲಿಗಳಿಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಮನ್ನಣೆ ಮಾಡ್ಬೇಕು. ಲೋಕಸಭಾ ಕ್ಷೇತ್ರದ ಚುನಾವಣೆಗೆ ನಮ್ಮ ಸಮಾಜಕ್ಕೆ ಟಿಕೆಟ್ ಕೊಡ್ಬೇಕು. ರಾಜಕೀಯ ಕ್ಷೇತ್ರದಲ್ಲಿ ಇಲ್ಲಿತನಕ ಬೇರೆಯವರಿಗೆ ಟಿಕೆಟ್ಗಳನ್ನು ಬಿಟ್ಟುಕೊಟ್ಟಿದ್ವಿ. ಸಂಸದರಾದ ಕೂಬಾ, ಜಿಎಂ ಸಿದ್ದೇಶ್, ಸುರೇಶ್ ಅಂಗಡಿ ಮೂವರಿಗೆ ಟಿಕೆಟ್ ಸಿಕ್ಕಿದೆ. ಇಷ್ಟು ದಿನಗಳಲ್ಲಿ ಎಷ್ಟೋ ಜನ ಸಿಎಂಗಳಾದ್ರು. ಡಿಸಿಎಂಗಳಾದ್ರು ಕೂಡ ನಮ್ಮ ಸಮಾಜಕ್ಕೆ ಸ್ಥಾನ ಸಿಗಲಿಲ್ಲ. ನಮ್ಮ ಸಮಾಜಕ್ಕೆ ಅಧಿಕಾರ ವಂಚನೆ ಆಗಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಲೋಕಸಭೆಯಲ್ಲಿ ಒಬ್ಬರೇ ಒಬ್ಬರು ನಮ್ಮ ಸಮಾಜದ ಸಂಸದರು ಇರುವುದು ನೋವಿನ ಸಂಗತಿ. ಕಿತ್ತೂರು ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಧಾರವಾಡ ಭಾಗದಲ್ಲಿ ಕಲ್ಯಾಣ ಕರ್ನಾಟಕದ ಕೊಪ್ಪಳ ಬೀದರ್ನಲ್ಲಿ ಅವಕಾಶ ಕೊಡ್ಬೇಕು ಎಂದು ಹೇಳಿದರು.
ಇನ್ನು ಬಿಜೆಪಿಯಿಂದ ವಚನಾನಂದ ಸ್ವಾಮೀಜಿಗೆ ಟಿಕೆಟ್ ಆಫರ್ ಕೊಟ್ಟರೆ ಏನ್ ಮಾಡ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಾದರೂ ಆಫರ್ ಬಂದರೆ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ. ಸಾಕಷ್ಟು ಜನ ನಮ್ಮ ಸಮಾಜದ ನಾಯಕರಿದ್ದಾರೆ. ಅವರ ಸಾಧನೆ, ಸಂಪನ್ಮೂಲಗಳ ನೋಡಿ ಟಿಕೆಟ್ ಕೊಡಲಿ. ಕೆಲವರು ಅನುಕಂಪದ ಲಾಭ ಪಡೆಯಲು ಪ್ರಯತ್ನ ಮಾಡ್ತಾರೆ. ನಾವು ಅದನ್ನೇ ಮಾಡ್ತೇವೆ. ಯಾರಾದರೂ ಹೆಸರು ಕೇಳಲಿ. ಹೆಸರನ್ನು ನಾವು ಸೂಚಿಸಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಘೋಷಿಸಿರುವ ಮೀಸಲಾತಿ ನಿರ್ಧಾರದಲ್ಲಿ ಗೊಂದಲ: ವಚನಾನಂದ ಶ್ರೀ