ಹಾವೇರಿ: ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದಾಗ ಜಾರಿಗೆ ತಂದ ಯೋಜನೆ ಅನುಗ್ರಹ. ಕುರಿಗಾಯಿಗಳ ಕುರಿಗಳು ಅವಘಡಗಳಲ್ಲಿ ರೋಗರುಜಿನಗಳಿಗೆ ಬಲಿಯಾದರೆ ಅವರುಗಳಿಗೆ ಪರಿಹಾರ ನೀಡುವ ಯೋಜನೆ. ದೊಡ್ಡಕುರಿ, ದೊಡ್ಡ ಮೇಕೆ ಸಾವನ್ನಪ್ಪಿದರೆ 5 ಸಾವಿರ ರೂಪಾಯಿ ಪರಿಹಾರ. ಸಣ್ಣಕುರಿ, ಸಣ್ಣಮೇಕೆ ಸಾವನ್ನಪ್ಪಿದರೆ 3,500 ರೂಪಾಯಿ ಪರಿಹಾರವನ್ನು ಕುರಿಗಾಯಿಗೆ ಪರಿಹಾರ ನೀಡಲಾಗುತ್ತಿತ್ತು. ಸಣ್ಣಕುರಿ ಮೃತಪಟ್ಟರೆ ಮೂರು ಸಾವಿರ ಪ್ರಕೃತಿ ವಿಕೋಪ, ಅಪಘಾತ ಸೇರಿದಂತೆ ರೋಗಗಳಿಂದ ಕುರಿ - ಮೇಕೆಗಳು ಸತ್ತರೆ ಸರ್ಕಾರ ಅನುಗ್ರಹ ಯೋಜನೆ ಮೂಲಕ ಪರಿಹಾರ ಸಿಗುತ್ತಿತ್ತು.
"ಆದರೆ, ಹಾವೇರಿ ಜಿಲ್ಲೆಯಲ್ಲಿ 2020-21, 2021-22, ಮತ್ತು 2022-23 ವರ್ಷದ ಅನುಗ್ರಹ ಯೋಜನೆಯ ಹಣ ಬಿಡುಗಡೆಯಾಗಿಲ್ಲ. ಮೂರು ವರ್ಷಗಳಿಂದ ಅನುಗ್ರಹ ಯೋಜನೆಯಡಿ ಪರಿಹಾರ ಬಂದಿಲ್ಲ. 2020 ರಿಂದ 2023 ರವರೆಗೆ ಹಾವೇರಿ ಜಿಲ್ಲೆಯಲ್ಲಿ 18,364 ಕುರಿಗಳು ಸಾವನ್ನಪ್ಪಿದ್ದು. ಕುರಿಗಾಯಿಗಳು ಅನುಗ್ರಹ ಯೋಜನೆಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 9 ಕೋಟಿ 08 ಲಕ್ಷ ರೂಪಾಯಿ ಪರಿಹಾರದ ಹಣ ಕುರಿಗಾಯಿಗಳಿಗೆ ಸಿಗಬೇಕಿದೆ. ಈ ರೀತಿಯ ಪರಿಹಾರ ಕುರಿಗಾಯಿಗಳಿಗೆ ಸಿಕ್ಕಿದ್ದರೆ ಕುರಿಗಾಯಿಗಳು ಮತ್ತೆ ಕುರಿಮರಿಗಳನ್ನು ತಗೆದುಕೊಂಡು ಸಾಕಣೆ ಮಾಡ ಬಹುದಾಗಿತ್ತು. ಅಲ್ಲದೇ ಕುರಿಗಳಿಗೆ ಔಷಧೋಪಚಾರ ಸೇರಿದಂತೆ ವಿವಿಧ ಕೆಲಸಗಳಿಗೆ ಸರ್ಕಾರದ ಪರಿಹಾರ ಉಪಯೋಗವಾಗುತ್ತಿತ್ತು. ಆದರೆ, ಸರ್ಕಾರ ಮೂರು ವರ್ಷ ಪರಿಹಾರದ ಹಣ ನೀಡಿಲ್ಲ"
"ಕುರಿಗಳನ್ನು ಬಡವರ ಹಸುಗಳು ಎಂದು ಕರೆಯಲಾಗುತ್ತದೆ. ಕುರಿಗಳನ್ನು ನಂಬಿ ಎಷ್ಟೋ ಜನರು ಜೀವನ ಕಟ್ಟಿಕೊಂಡಿದ್ದಾರೆ. ಇಂತಹುವುದರಲ್ಲಿ ಕುರಿಗಳು ಯಾವುದಾದರೂ ಕಾರಣಕ್ಕೆ ಸಾವನ್ನಪ್ಪಿದ್ದರೆ, ಅದಕ್ಕೆ ಸರ್ಕಾರ ಅನುಗ್ರಹ ಯೋಜನೆಯಲ್ಲಿ ಪರಿಹಾರ ನೀಡುತ್ತೆ ಎಂಬ ಭರವಸೆ ಇತ್ತು. ಆದರೆ, ಈಗ ಈ ಭರವಸೆಯೂ ಇಲ್ಲದಂತಾಗಿದೆ" ಎಂದು ಕುರಿಗಾಯಿಗಳು ಆರೋಪಿಸುತ್ತಿದ್ದಾರೆ.
ಕಳೆದ 3 ವರ್ಷಗಳಿಂದ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಕುರಿಗಾಹಿಗಳು ಕಾಯುತ್ತಿದ್ದಾರೆ. ಸಣ್ಣಪುಟ್ಟ ಕುರಿ ಮೇಕೆ ಸಾಕಣೆದಾರರು ಸರ್ಕಾರಕ್ಕೆ ನೆರವಾಗುವಂತೆ ಅಂಗಲಾಚುತ್ತಿದ್ದಾರೆ. ಕುರಿಗಳು ಅಕಾಲಿಕವಾಗಿ ಸಾವನ್ನಪ್ಪಿದರೆ, ಸರ್ಕಾರದಿಂದ 5 ಸಾವಿರ ರೂಪಾಯಿ ಸಿಗುತ್ತೆ ಎಂದು ಸತ್ತ ಕುರಿಗಳನ್ನು ಕುರಿಗಾಯಿಗಳು ಮರಣೋತ್ತರ ಪರೀಕ್ಷೆ ಮಾಡಿಸುತ್ತಿದ್ದರು. ಅಲ್ಲದೇ ಅದಕ್ಕೆ ಐದನೂರು ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಮೂರು ವರ್ಷಗಳ ಹಿಂದೆ ಸತ್ತ ಕುರಿಗಳಿಗೆ ಪರಿಹಾರ ಬಂದಿಲ್ಲ ಎಂದು ಬೇಸರಗೊಂಡ ಕುರಿಗಾಯಿಗಳು ಸತ್ತಕುರಿಗಳನ್ನು ಮರಣೋತ್ತರ ಪರೀಕ್ಷೆ ನಡೆಸದೇ ಹಾಗೆ ಎಸೆಯುತ್ತಿದ್ದಾರೆ.
ರೈತರ ಆರೋಪಕ್ಕೆ ಪಶು ವೈದ್ಯರ ಹೇಳಿಕೆ ಹೀಗಿದೆ: ಪಶುಪಾಲನಾ ಪಶುವೈದ್ಯಕೀಯ ಸೇವಾ ಇಲಾಖೆಯ ಡಾ.ಎಸ್.ವಿ.ಸಂತಿ ಅವರು, "ಹಾವೇರಿ ಜಿಲ್ಲೆಯಲ್ಲಿ 2020 ರಿಂದ 2023 ರವರೆಗೆ ಜಿಲ್ಲೆಯಲ್ಲಿ 18,364 ಕುರಿಗಳು ಸಾವನ್ನಪ್ಪಿದ್ದು ಕುರಿಗಾಯಿಗಳು ಅನುಗ್ರಹ ಯೋಜನೆಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕಳುಹಿಸಿಕೊಡಲಾಗಿದೆ. 2020 ರಿಂ 2023 ರವರೆಗೆ ಕಳುಹಿಸಿದ ಅನುಗ್ರಹ ಯೋಜನೆಯ ಅರ್ಜಿಗಳಿಗೆ ಮಾತ್ರ ಪರಿಹಾರ ಬಂದಿಲ್ಲ. ಉಳಿದಂತೆ 2023-24 ಮತ್ತು 2024-25 ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಕುರಿಗಾಯಿಗಳಿಗೆ ಅನುಗ್ರಹ ಯೋಜನೆಯ ಪರಿಹಾರ ಬಂದಿದೆ. 2023 ರ ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ 2024 ರವರೆಗೆ ಹಾವೇರಿ ಜಿಲ್ಲೆಯಲ್ಲಿ 2,845 ಕುರಿಗಳು ಸಾವನ್ನಪ್ಪಿದ್ದು ಇವುಗಳಿಗೆ 1ಕೋಟಿ 4 ಲಕ್ಷ ರೂಪಾಯಿ ಅನುದಾನ ಬೇಕಾಗಿತ್ತು. ಅದರಲ್ಲಿ 1 ಕೋಟಿಯ 3 ಲಕ್ಷದ 80 ಸಾವಿರ ಅನುದಾನ ಬಿಡುಗಡೆ ಮಾಡಲಾಗಿದೆ".
"ಜಿಲ್ಲೆಯಲ್ಲಿ ಡಿಬಿಟಿ ಸಮಸ್ಯೆ ಇರುವುದರಿಂದ 65 ಲಕ್ಷ ರೂಪಾಯಿ ಕುರಿಗಾಹಿಯಗಳ ಖಾತೆಗೆ ಪರಿಹಾರ ಧನ ಜಮೆಯಾಗಿದೆ. ಇನ್ನುಳಿದ ಹಣ ಕುರಿಗಾಯಿಗಳಿಗೆ ಶೀಘ್ರದಲ್ಲಿ ಜಮೆಯಾಗಲಿದೆ. ಇದೆಲ್ಲ ಜಮಾ ಆದರೆ 185 ಕುರಿಗಳ ಸಾವಿಗೆ ಮಾತ್ರ ಪರಿಹಾರ ನೀಡುವುದು ಬಾಕಿ ಉಳಿದಂತಾಗುತ್ತದೆ. 2024ರ ಜೂನ್ವರೆಗೆ 609 ಕುರಿಗಳು ಸಾವನ್ನಪ್ಪಿದ್ದು, ಅವುಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅದು ಬಿಡುಗಡೆಯಾಗುತ್ತಿದ್ದಂತೆ ಹಂತ ಹಂತವಾಗಿ ಕುರಿಗಾಯಿಗಳ ಖಾತೆಗೆ ಪರಿಹಾರ ಹಣ ಜಮೆಯಾಗಲಿದೆ. ವಿಚಿತ್ರ ಎಂದರೆ 2020 ರಿಂದ 2023 ರ ಮಾರ್ಚ್ವರೆಗೆ ಸಾವನ್ನಪ್ಪಿದ ಕುರಿಗಳಿಗೆ ಅನುದಾನ ಇಲ್ಲದ ಕಾರಣ ಅನುಗ್ರಹ ಯೋಜನೆಯಲ್ಲಿ ಪರಿಹಾರ ನೀಡದೇ ನಿಲ್ಲಿಸಲಾಗಿದೆ. ಆದರೆ, 23 ಮಾರ್ಚ್ ನಂತರದಲ್ಲಿ ಸಾವನ್ನಪ್ಪಿದ ಕುರಿಗಳಿಗೆ ಸರ್ಕಾರ ಅನುದಾನ ನೀಡಿದ್ದು, ಕುರಿಗಾಯಿಗಳಿಗೆ ಪರಿಹಾರ ನೀಡುತ್ತಿದೆ. ಸರ್ಕಾರ ಅದಕ್ಕೆ 9 ಕೋಟಿ ರೂಪಾಯಿ ಅನುದಾನ ನೀಡಿದರೆ, ಅದನ್ನೂ ಸಹ ಪರಿಹಾರ ನೀಡುವುದಾಗಿ" ಸಂತಿ ತಿಳಿಸಿದ್ದಾರೆ.
"ಇತ್ತಿಚೆಗೆ ಮೃತಪಟ್ಟಿರುವ ಕುರಿಗಳಿಗೆ ಪರಿಹಾರ ಸಿಗುತ್ತಿದೆ. ಆದರೆ, ಮೂರು ವರ್ಷಗಳಿಂದ ನಾವು ಚಾತಕಪಕ್ಷಿಯಂತೆ ಪರಿಹಾರಕ್ಕೆ ಕಾಯುತ್ತಿದ್ದೇವೆ. ಆದರೂ ನಮಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ. ಸರ್ಕಾರ ಈ ಕೂಡಲೇ ಅನುಗ್ರಹ ಯೋಜನೆ ಅಡಿ ಹಾವೇರಿ ಜಿಲ್ಲೆಗೆ ಶೀಘ್ರವೇ ಅನುದಾನ ಬಿಡುಗಡೆ ಮಾಡಿ ಕುರಿಗಾಯಿಗಳ ನೆರವಿಗೆ ಧಾವಿಸುವಂತೆ" ರೈತರು ಒತ್ತಾಯಿಸಿದ್ದಾರೆ.