ದಾವಣಗೆರೆ: ವೀರಶೈವ ಲಿಂಗಾಯತರಿಗೆ ಲೋಕಸಭೆ, ರಾಜ್ಯಸಭೆಯಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಪತ್ರ ಬರೆಯುವಂತೆ ಬರೆದಿದ್ದೇನೆ. ನಮ್ಮ ಸಮಾಜಕ್ಕೆ ಆದ್ಯತೆ ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹಾಗೂ ಎಐಸಿಸಿಯ ವೇಣುಗೋಪಾಲ್ ಅವರಿಗೆ ಹೆಚ್ಚಿನ ಆದ್ಯತೆ ಕೊಡುವಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು. ನಾವು ಪತ್ರವೇನೋ ಬರೆದಿದ್ದೇವೆ. ಅವರ ಕಡೆಯಿಂದ ಇನ್ನೂ ಏನೂ ಪ್ರತಿಕ್ರಿಯೆ ಬಂದಿಲ್ಲ. ಮುಂದೆ ಬರುತ್ತೆ ಎಂಬ ವಿಶ್ವಾಸವಿದೆ. ಇಷ್ಟೇ ಸ್ಥಾನಗಳು ಬೇಕೆಂದು ನಾವು ಕೇಳಿಲ್ಲ. ಜನರಲ್ ಆಗಿ ಕೇಳಿದ್ದೇವಷ್ಟೇ ಎಂದು ಹೇಳಿದರು.
ಇದಲ್ಲದೇ ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲೂ ಕೂಡ ವೀರಶೈವ ಲಿಂಗಾಯತ ಪ್ರತಿನಿಧಿಗಳಿಗೆ ಒಟ್ಟು 70ಕ್ಕೂ ಹೆಚ್ಚು ಟಿಕೆಟ್ ಕೊಡಬೇಕೆಂದು ವೀರಶೈವ ಲಿಂಗಾಯತ ಮಹಾಸಭಾದಿಂದ ಬೇಡಿಕೆ ಇಡಲಾಗಿತ್ತು. ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ 12-13 ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ವಲಯದಿಂದ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ವೀರಶೈವಲಿಂಗಾಯತರನ್ನ ಒಬಿಸಿ ಪಟ್ಟಿ ಸೇರ್ಪಡೆಗೆ ಶಿಫಾರಸು ಮಾಡಬೇಕು: ಶಾಮನೂರು ಶಿವಶಂಕರಪ್ಪ