ಶಿವಮೊಗ್ಗ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡೋರು ಇರುತ್ತಾರೆ. ದುರಾಸೆಗೆ ಬಿದ್ದು ಸಾಕಷ್ಟು ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮೋಸ ಮಾಡುವವರು ಹಳೆಯ ಪದ್ಧತಿ ಚೈನ್ ಸಿಸ್ಟಮ್ ಬಳಸಿಕೊಂಡು ವಂಚನೆ ಎಸಗಿದ್ದಾರೆ. ಈ ಕುರಿತು ನಗರದಲ್ಲಿ ಪ್ರಕರಣ ದಾಖಲಾಗಿದೆ.
ಕಿಶೋರಕುಮಾರ ಎಂಬುವರಿಗೆ ನಾಗರಾಜ ಎಂಬುವವರು Make free trips ಎಂಬ ಕಂಪನಿಯ ಬಗ್ಗೆ ತಿಳಿಸಿದ್ದರು. ನೀವು ಈ ಕಂಪನಿಗೆ 9000/- ರೂ. ಹಣ ಕಟ್ಟಿ ಸದಸ್ಯರಾಗಿ. ನೀವು ಬೇರೆ 06 ಜನ ಸದಸ್ಯರನ್ನು ನಮ್ಮ ಕಂಪನಿಗೆ ಸೇರಿಸಿದರೆ ನಿಮಗೆ ಹೊರ ರಾಜ್ಯಕ್ಕೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ. ನೀವು ಕಟ್ಟಿದ 9000/- ರೂ. ಹಣವನ್ನು ಸಹ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದರು. ಹಾಗೆಯೇ Make free Money ಗೆ 90000/- ಹಣವನ್ನು ಹೂಡಿಕೆ ಮಾಡಿದರೆ ನಾವು ನಿಮಗೆ ಬೆಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ನಂತರ ಬಾಂಬೆಯಿಂದ ಕ್ರೂಜ್ ಎಂಬ ಹಡಗಿನಲ್ಲಿ ಗೋವಾಕ್ಕೆ 02 ರಾತ್ರಿ 03 ಹಗಲು ಉಚಿತವಾಗಿ ಟ್ರಿಪ್ ಕರೆದುಕೊಂಡು ಹೋಗುತ್ತೇವೆ. ನೀವು ನಮ್ಮಲ್ಲಿ ಹಣ ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು 6000/- ರೂ. ನಂತೆ 33 ತಿಂಗಳು ಅಂದರೆ ಒಟ್ಟು 1,98,000/- ರೂ. ಹಣವನ್ನು ನಿಮಗೆ ವಾಪಸ್ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಈ ಕುರಿತು ಕಿಶೋರ್ ಕುಮಾರ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳಾದ ಮಹಮದ್ ಲತೀಪ್, ಕಿಶೋರ್ ಬಿ.ಕೆ., ಮಹಮದ್ ಅಶ್ರಫ್, ಇವರುಗಳು ಹರ್ಷ ಫರ್ನ್ ಇನ್ ಹೋಟೆಲ್ ಹಾಗೂ ಇತರೆ ಹೋಟೆಲ್‍ಗಳಲ್ಲಿ ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡಿ Make free trips ಹಾಗೂ Make free Money ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದರಿಂದ ಕಿಶೋರಕುಮಾರ್ ಅವರು ಅವರ ಮಾತನ್ನು ನಂಬಿ ಆರೋಪಿ ನಾಗರಾಜರವರಿಗೆ ಫೋನ್ ಪೇ/ಗೂಗಲ್ ಪೇ ಹಾಗೂ ನಗದು ರೂಪದಲ್ಲಿ ಒಟ್ಟು 7,52,370/- ರೂ. ಹಣವನ್ನು ಆರೋಪಿ ಕಿಶೋರ್ ಬಿ.ಕೆ.ಗೆ ಫೋನ್ ಪೇ/ಗೂಗಲ್ ಪೇ ಮೂಲಕ 1,16,000/- ರೂ ಹಣವನ್ನು, ಆರೋಪಿ ಮಹಮದ್ ಆಶ್ರಫ್ ಬ್ಯಾಂಕ್ ಖಾತೆಗೆ 1,00,000/- ರೂ. ಹಣವನ್ನು ಹಾಗೂ ಮಹಮದ್ ಲತೀಫ್ ಅವರ ಹೆಂಡತಿ ಪಾತಿಮಾ ಅವರ ಕೆನರಾ ಬ್ಯಾಂಕ್ ಖಾತೆಗೆ 2,80,000/- ರೂ.ಗಳನ್ನು ಕಳುಹಿಸಿಕೊಟ್ಟಿದ್ದರು.
ಆದರೆ ಪಿರ್ಯಾದಿ ಕಿಶೋರ್ ಹಾಗೂ ಅವರ ಕುಟುಂಬದರವರಿಗೆ ಒಡಿಶಾ ಹಾಗೂ ಗೋವಾಕ್ಕೆ ಪ್ರವಾಸ ಕರೆದುಕೊಂಡು ಹೋಗಿದ್ದು, ಪಿರ್ಯಾದಿಯವರಿಗೆ ಆ ಕಂಪನಿಯಿಂದ ಇದುವರೆಗೆ 12000/- ರೂ. ಮಾತ್ರ ವಾಪಸ್ ಕೊಟ್ಟಿರುತ್ತಾರೆ. ಉಳಿದ ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ. ಪಿರ್ಯಾದಿಯಂತೆ ಈ ಕಂಪನಿಗೆ ಹೂಡಿಕೆ ಮಾಡಿದ್ದ ವಿನೋಬನಗರ ನಿವಾಸಿ ಪ್ರಸನ್ನ ಅವರಿಗೆ 90000/- ರೂ., ಶಿವಮೊಗ್ಗ ಆರ್.ಎಂ.ಎಲ್ ನಗರ ವಾಸಿ ಗೈಬಾನ್ ಖಾನ್ 180000/- ರೂ., ನವುಲೆ ವೆಂಕಟಾಪುರ ನಿವಾಸಿಯಾದ ದೊಡ್ಡವೀರಪ್ಪ 218000/- ರೂ., ಗಾಂಧಿಬಜಾರ್ ವಾಸಿ ಮೋಹನ್ 485000/-ರೂ., ಅಶ್ವಥ್ ನಗರ ನಿವಾಸಿ ಶಿವಶಂಕರ ಶಾಸ್ತ್ರಿ 213000/-ರೂ., ಹರಿಗೆ ನಿವಾಸಿಯಾದ ಶ್ರೀಮತಿ ಗಂಗಾವತಿ 45000/- ರೂ., ಗೋಪಾಳ ನಿವಾಸಿ ರಮೇಶ 9000/- ರೂ., ತೀರ್ಥಹಳ್ಳಿ ನಿವಾಸಿಯಾದ ಅಬ್ದುಲ್ ಮುತಲಬ್ 9000/- ರೂ. ಹಾಗೂ ಇತರೆಯವರಿಂದ ಹಣವನ್ನು ಪಡೆದುಕೊಂಡು ಅವರಿಗೂ ವಾಪಸ್ ಹಣ ಕೊಡದೇ ಮೋಸ ಮಾಡಿದ್ದಾರೆ. ಹೀಗಾಗಿ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Make free trips ಹಾಗೂ Make free Moneyಗೆ ಹಣ ಹೂಡಿಕೆ ಮಾಡಿ ಮೋಸ ಹೋದವರು ಯಾರಾದರು ಇದ್ದಲ್ಲಿ ಜಯನಗರ ಪೊಲೀಸ್ ಠಾಣೆಗೆ ಬೇಟಿ ನೀಡಿ ಮಾಹಿತಿ ನೀಡುವಂತೆ ಜಯನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ: ಆನ್ಲೈನ್ ಷೇರು ಮಾರುಕಟ್ಟೆ ಹೂಡಿಕೆ ಆಮಿಷ: ಮಂಗಳೂರಿನ ವ್ಯಕ್ತಿಗೆ 1.50 ಕೋಟಿ ವಂಚನೆ - Online Stock Market Fraud