ಬೆಂಗಳೂರು: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಬೋರ್ಡ್ಗೆ (ಟಿಟಿಡಿ) ನೂತನ ಚೇರ್ಮನ್ ಮತ್ತು ಸದಸ್ಯರನ್ನು ನೇಮಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಈ ಮಂಡಳಿಯಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ಸಿಕ್ಕಿದೆ. ಇನ್ನು ಇದೇ ಮೊದಲ ಬಾರಿಗೆ ಟಿಟಿಡಿ ಮಂಡಳಿ ಸದಸ್ಯರಾಗಿ ಸವಿತಾ ಸಮಾಜದ ಮುಖಂಡರೊಬ್ಬರು ನೇಮಕವಾಗಿದ್ದಾರೆ.
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನರೇಶ್ ಕುಮಾರ್ ಅವರು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಬೋರ್ಡ್ ಸದಸ್ಯರಾಗಿ ನೇಮಕವಾದವರು.
ಮೊದಲ ಬಾರಿಗೆ ಸವಿತಾ ಸಮಾಜದ ವ್ಯಕ್ತಿಗೆ ಸ್ಥಾನ: ವಿಶ್ವದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಇದೇ ಮೊದಲ ಬಾರಿಗೆ ಸವಿತಾ ಸಮಾಜದ ವ್ಯಕ್ತಿಯೊಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಹೊಸದೊಂದು ಕ್ರಾಂತಿಗೆ ಟಿಟಿಡಿ ದೇವಸ್ಥಾನ ಮುಂದಾಗಿದೆ.
ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಅವರು, ವಿದ್ಯಾರ್ಥಿ ದೆಸೆಯಿಂದಲೂ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಂತರ ಸಂಘದ ಕಾರ್ಯಕರ್ತರಾಗಿ, ಕರ್ನಾಟಕ ರಾಜ್ಯದ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ನಾನಾ ಜವಾಬ್ದಾರಿಗಳನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.
"ದೇವಸ್ಥಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸವಿತಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದು ಬಹಳ ಸಂತಸದ ವಿಷಯವಾಗಿದೆ. ಸವಿತಾ ಸಮುದಾಯದ ಬಗ್ಗೆ ಸಮಾಜದಲ್ಲಿ ಇರುವಂತಹ ಅಭಿಪ್ರಾಯವನ್ನು ಬದಲಿಸುವುದು, ಒಳ್ಳೆಯ ಅಭಿಪ್ರಾಯ ಬೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ" ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಟಿಟಿಡಿಗೆ 24 ಸದಸ್ಯರನ್ನು ನೇಮಿಸಿ ಆದೇಶ: ಟಿಟಿಡಿಗೆ ನೂತನ ಆಡಳಿತ ಮಂಡಳಿಯನ್ನು ನೂತನ ಮುಖ್ಯಮಂತ್ರಿ ಚಂದ್ರಬಾಬು ಅಂತಿಮಗೊಳಿಸಿದ್ದಾರೆ. ಮಂಡಳಿಯಲ್ಲಿ ಐವರು ಮಹಿಳೆಯರು ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಅವರೂ ಕೂಡ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಬಿಆರ್ ನಾಯ್ಡು ಅವರು ಟಿಟಿಡಿ ನೂತನ ಚೇರ್ಮನ್ ಆಗಿ ನೇಮಕವಾಗಿದ್ದಾರೆ.
ಕರ್ನಾಟಕದ ಮೂವರಿಗೆ ಸ್ಥಾನ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಹೆಚ್.ಎಲ್. ದತ್ತು, ಸವಿತಾ ಸಮಾಜದ ಮುಖಂಡ ನರೇಶ್ ಕುಮಾರ್ ಮತ್ತು ದರ್ಶನ್ ಆರ್.ಎನ್ ಅವರು ಕರ್ನಾಟಕದಿಂದ ಆಯ್ಕೆಯಾದ ಟಿಟಿಡಿಯ ನೂತನ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಹಬ್ಬ: ಉಭಯ ಶ್ರೀ ಪಾದರ ಉಪಸ್ಥಿತಿಯಲ್ಲಿ ಜಲಪೂರಣ ಸಂಪನ್ನ