ಚಿಕ್ಕೋಡಿ: ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯಬೇಕು. ಭಕ್ತಿ, ಶ್ರದ್ಧೆ ಮತ್ತು ನಿಷ್ಠೆಯಿಂದ ಯಾರು ಸಂಸ್ಕೃತ ಕಲಿಯುತ್ತಾರೋ ಅವರ ಬಾಳು ಬಂಗಾರವಾಗುತ್ತದೆ ಎಂದು ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಸ್ವಾಮಿಗಳವರ ಮಧುರಖಂಡಿ ಕಮರಿಮಠದ ಶೋತ್ರಿಯ ಬ್ರಹ್ಮನಿಷ್ಠ ದುಂಡೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಸಿದ್ದಲಿಂಗೇಶ್ವರ ಸ್ವಾಮೀಜಿಯವರ ಸಂಸ್ಕೃತ, ವೇದ, ಸಂಗೀತ ಪಾಠಶಾಲೆಯ ಅಡಿಯಲ್ಲಿ ಆಯೋಜಿಸಿದ್ದ 47ನೇ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
"ಈಟಿವಿ ಭಾರತದಲ್ಲಿ ನಂದೇಶ್ವರ ಗ್ರಾಮ ಸಂಸ್ಕೃತದ ಪಾಠಶಾಲೆಯ ಬಗ್ಗೆ ವರದಿ ಪ್ರಸಾರ ಮಾಡಲಾಗಿತ್ತು. ಆ ವರದಿ ನೋಡಿ ಆಂಧ್ರಪ್ರದೇಶದ ತಿರುಪತಿ ವಿಶ್ವವಿದ್ಯಾಲಯದವರು ಸಂಸ್ಕೃತ ಬಲ್ಲ ನಂದೇಶ್ವರ ಗ್ರಾಮದ 20 ವ್ಯಕ್ತಿಗಳಿಗೆ ಉನ್ನತ ಅಧ್ಯಯನಕ್ಕಾಗಿ ಆಹ್ವಾನ ನೀಡಿದ್ದಾರೆ. ಇದು ನಂದೇಶ್ವರ ಗ್ರಾಮದ ಕೀರ್ತಿ ಹೆಚ್ಚಿಸಿದೆ. ಶ್ರೀಮಠದ ಸಂಸ್ಕೃತ ಸೇವೆ ರಾಜ್ಯ, ದೇಶವಲ್ಲದೇ ಅಮೆರಿಕ ಹಾಗೂ ಇಂಡೋನೇಷಿಯಾ ದೇಶಗಳಲ್ಲಿ ವಾಸವಿರುವ ಭಾರತೀಯ ಪ್ರಜೆಗಳನ್ನು ತಲುಪಿದೆ. ಭಾರತೀಯ ಸಂಶೋಧನಾ ಸಂಸ್ಥೆ ಇಸ್ರೋಗೆ 2,000 ಜನ ಸಂಸ್ಕೃತ ಬಲ್ಲವರು ಬೇಕಾಗಿರುವುದು ಸಂಸ್ಕೃತ ಭಾಷೆಯ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸುತ್ತದೆ. ಸಂಸ್ಕೃತ ಕಲಿತವರ ಮನೆ ಸುಸಂಸ್ಕೃತವಾಗುತ್ತದೆ. ಎಲ್ಲ ಭಾಷೆಗಳಿಗೆ ತಾಯಿ ಭಾಷೆಯಾಗಿರುವ ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯಬೇಕು" ಎಂದರು.
"ಆಸಕ್ತಿಯಿಂದ ಸತತ ಪ್ರಯತ್ನಪಟ್ಟರೆ ಸಂಸ್ಕೃತ ಭಾಷೆ ಸರಳವಾಗಿ ಓದಲು, ಬರೆಯಲು, ಮಾತನಾಡಲು ಬರುತ್ತದೆ. ಸಂಸ್ಕೃತ ಭಾಷೆಯ ಅಧ್ಯಯನದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಶಿಬಿರಾರ್ಥಿಗಳು ನಿರಂತರವಾಗಿ ಸಂಸ್ಕೃತ ಸಂಭಾಷಣೆಯಲ್ಲಿ ತೊಡಗಬೇಕು" ಎಂದು ಹೇಳಿದರು.
ಉಚಿತ ಸಂಸ್ಕೃತ ಸಂಭಾಷಣ ಶಿಬಿರದಲ್ಲಿ ವಿವಿಧ ಜಿಲ್ಲೆಗಳ 17 ಗ್ರಾಮಗಳ ಅನೇಕ ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಸ್ಥರು ಭಾಗವಹಿಸಿದ್ದರು. ಶಿಬಿರದ ಸಮಾರೋಪ ಸಮಾರಂಭದ ಅಂಗವಾಗಿ ಶಿಬಿರಾರ್ಥಿಗಳಿಂದ ವಿವಿಧ ಸಂಸ್ಕೃತ ಭಾಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ: ಸಂಸ್ಕೃತ ಭಾಷೆ ಮಾತನಾಡಿ ದೇಶದ ಗಮನ ಸೆಳೆದ ನಂದೇಶ್ವರ ಗ್ರಾಮ