ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಸ್.ಪಿ ದಿನೇಶ್ ಪಕ್ಷೇತ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಟಿಕೆಟ್ ಆಯನೂರು ಮಂಜುನಾಥ್ಗೆ ಘೋಷಣೆಯಾಗಿದ್ದು, ಈಗ ಅವರಿಗೆ ಬಂಡಾಯದ ಬಿಸಿ ಎದುರಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಸ್.ಪಿ ದಿನೇಶ್ ಮಾತನಾಡಿ, ಪದೇ ಪದೆ ಪಕ್ಷಕ್ಕೆ ಬಂದು ಹೊರ ಹೋಗುವ ವ್ಯಕ್ತಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿರುವುದರಿಂದ ನಾನು ಯಾವುದೇ ಕಾರಣಕ್ಕೂ ಅವರ ಪರವಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದರು.
ನನ್ನ ನಿರ್ಧಾರ ಕೇಳಿ ಅವರಿಗೆ ಆಶ್ಚರ್ಯವಾಯಿತು. ಯಾಕೆಂದರೆ ಕೆಪಿಪಿಸಿ ಅಧ್ಯಕ್ಷರು ಮೊದಲಿನಿಂದಲೂ ನನ್ನ ಪರವಾಗಿ ಇದ್ದರು. ಎಐಸಿಸಿನಲ್ಲಿ ಹೇಗೆ ನಿರ್ಧಾರ ಬದಲಾವಣೆ ಆಯಿತು ಎಂಬ ಬಗ್ಗೆ ಅವರಿಗೂ ಆಶ್ಚರ್ಯವಾಗಿದೆ. ಇನ್ನೂ ಸಮಯ ಇದೆ, ಪಕ್ಷ ನನ್ನ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಆಶಾಭಾವನೆ ನನ್ನಲ್ಲಿದೆ. ಮೇ 16ನೇ ತಾರೀಖಿನ ಒಳಗೆ ಬಿ ಫಾರಂ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಅಥವಾ ಪಕ್ಷ ಇತರೆ ಯಾರಾದರೂ ಕಾರ್ಯಕರ್ತನಿಗೆ ಕೊಟ್ಟರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುತ್ತೇನೆ. ಇದೇ ಅಭ್ಯರ್ಥಿ ಮುಂದುವರೆದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಮತದಾರರು ಪತ್ರದ ಮೂಲಕ ನನ್ನ ಸ್ಪರ್ಧೆಗೆ ಬೆಂಬಲ ನೀಡಿದ್ದಾರೆ. ಅಲ್ಲದೆ ರಾಜ್ಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ನನಗೆ ಬೆಂಬಲ ನೀಡಿದ್ದಾರೆ. ಇದು ನನಗೆ ಆನೆ ಬಲ ನೀಡಿದೆ, ಕಾರಣ ನನ್ನ ಕ್ಷೇತ್ರದಲ್ಲಿ ಮೂರು ಸಾವಿರದಷ್ಟು ಅತಿಥಿ ಉಪನ್ಯಾಸಕರು ಇದ್ದಾರೆ. ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿ ಟಿಕೆಟ್ ತಪ್ಪಿಸಿದ್ದಾರೆ. ನಾನು ಸ್ಪರ್ಧೆ ಮಾಡುವ ಮೂಲಕ ಅವರಿಗೆ ಸರಿಯಾದ ಪ್ರತ್ಯುತ್ತರ ನೀಡುತ್ತೇನೆ ಎಂದು ಹೇಳಿದರು.
ದಿನೇಶ್ಗೆ ಎರಡು ಬಾರಿ ಸೋಲು: ನೈಋತ್ಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. 2012ರಲ್ಲಿ ಎಸ್.ಪಿ. ದಿನೇಶ್ ಮೊದಲ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಡಿ.ಹೆಚ್. ಶಂಕರಮೂರ್ತಿ ಅವರ ವಿರುದ್ಧ ಸೋಲನುಭವಿಸಿದ್ದರು. ನಂತರ 2018ರಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ವಿರುದ್ಧ ಸೋತಿದ್ದರು.