ಬೆಂಗಳೂರು: ಎಸ್.ಎಂ. ಕೃಷ್ಣ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ನಡೆದ ವರನಟ ಡಾ.ರಾಜ್ಕುಮಾರ್ ಅಪಹರಣ, ಕಾಡುಗಳ್ಳ ವೀರಪ್ಪನ್ನಿಂದ ಅವರನ್ನು ಬಿಡುಗಡೆ ಮಾಡಿಸಿದ್ದೇ ರೋಚಕ. ಕಾಡುಗಳ್ಳ ವೀರಪ್ಪನ್, ಡಾ. ರಾಜ್ಕುಮಾರ್ ಸೇರಿದಂತೆ ಮೂವರನ್ನು ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ಗಾಜನೂರಿನ ಅವರ ತೋಟದ ಮನೆಯಿಂದ ಅಪಹರಿಸಿದ ಕರಾಳ ಘಟನೆ 2000 ಇಸವಿಯ ಜುಲೈ 30 ರಂದು ನಡೆದಿತ್ತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ. ಕೃಷ್ಣ ಅವರು.
ಖ್ಯಾತರಾಗಿರುವವರನ್ನು ಅಪಹರಿಸಿದರೆ ಹಣ ಸಿಗುತ್ತದೆಂದು ತಿಳಿದ ವೀರಪ್ಪನ್, ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸುವ ಸಂಚು ಮಾಡಿದ್ದ. ತನ್ನ ಮಾಹಿತಿದಾರರಿಂದ ರಾಜ್ಕುಮಾರ್ ಅವರು ಗಾಜನೂರಿಗೆ ಬರುವ ವಿಷಯ ತಿಳಿದು 2000ರ ಜುಲೈ 30ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ರಾಜ್ಕುಮಾರ್ ಅವರನ್ನು ಹಾಗೂ ಇನ್ನಿತರ ಮೂವರನ್ನು ಅಪಹರಿಸಿ ಕರೆದೊಯ್ದಿದ್ದ. ಅವರನ್ನು ಸತ್ಯಮಂಗಲ ಕಾಡಿನಲ್ಲಿ 108 ದಿನಗಳ ಕಾಲ ಒತ್ತೆಯಾಗಿರಿಸಿಕೊಂಡಿದ್ದ.
ಅಪಹರಿಸಿದ್ದೇಗೆ? ಖಾಕಿ ಹಾಗೂ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದ ವೀರಪ್ಪನ್ ತಂಡದ ನಾಲ್ವರು ಫಾರ್ಮ್ ಹೌಸ್ನ ಮುಂಬಾಗಿಲು ತಟ್ಟಿದ್ದರು. ಬಾಗಿಲು ಪೂರ್ತಿ ತೆರೆಯುವಷ್ಟರಲ್ಲಿಯೇ ಬಲವಂತವಾಗಿ ಅವರು ಬಾಗಿಲನ್ನು ನೂಕಿಕೊಂಡು ಒಳಕ್ಕೆ ನುಗ್ಗಿದ್ದರು. ಎರಡು ನಿಮಿಷಗಳ ನಂತರ ವೀರಪ್ಪನ್ ಸಹ ಆ ಮನೆಯ ಒಳಗೆ ಪ್ರವೇಶಿದ್ದ. ಆತನನ್ನು ನೋಡಿದ ಕೂಡಲೇ ಮನೆಯೊಳಗಿದ್ದವರು ಗಾಬರಿಗೊಂಡಿದ್ದರು. ಆಗ ಕುಳಿತಿದ್ದ ರಾಜ್ಕುಮಾರ್ ಅವರನ್ನು ವೀರಪ್ಪನ್ ಉದ್ದೇಶಿಸಿ, "ಅಯ್ಯಾ, ಬನ್ನಿ ಹೋಗೋಣ" ಎಂದ. ರಾಜ್ಕುಮಾರ್ ಮೇಲೆದ್ದ ಕೂಡಲೇ ತನ್ನ ಬಳಿಯಿದ್ದ ಒಂದು ಆಡಿಯೋ ಕ್ಯಾಸೆಟನ್ನು ಅಲ್ಲೇ ಇದ್ದ ಪಾರ್ವತಮ್ಮನವರಿಗೆ ಕೊಟ್ಟು, "ಇದನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ಕೈಗೆ ಕೊಡಿ. ನನಗೇನು ಬೇಕೋ ಅದು ಅವರಿಗೆ ತಿಳಿಯುತ್ತದೆ. ನಾನು ಅಯ್ಯನವರಿಗೆ ಏನೂ ಹಾನಿ ಮಾಡುವುದಿಲ್ಲ ಚಿಂತಿಸಬೇಡಿ" ಎಂದಿದ್ದನಂತೆ. ರಾಜ್ಕುಮಾರ್ ಜೊತೆ ಅವರ ಅಳಿಯ ಗೋವಿಂದರಾಜ್, ಸಂಬಂಧಿಕ ನಾಗೇಶ್ ಹಾಗೂ ಸಹಾಯಕ ನಾಗಪ್ಪ ಮಾರಡಗಿ ಅವರನ್ನು ಕರೆದೊಯ್ದಿದ್ದ. ವೀರಪ್ಪನ್ ಯೋಚಿಸಿದ್ದಕ್ಕಿಂತ ಉತ್ತಮವಾಗಿ ನಡೆದ ಈ ಕಾರ್ಯಾಚರಣೆ ಮುಂದಿನ 108 ದಿನಗಳ ಕಾಲ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಿದ್ದೆಗೆಡಿಸಿ ಇಡೀ ವಿಶ್ವದ ಗಮನ ಸೆಳೆದಿತ್ತು.
ಡಾ.ರಾಜ್ಕುಮಾರ್ ಅವರನ್ನು ಅಪಹರಣ ಮಾಡಿದ್ದ ವೀರಪ್ಪನ್ ಅಂದಿನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದ. ಅದರಲ್ಲಿ ಹಣವೂ ಸೇರಿತ್ತು. ಆದರೆ, ಈ ಕುರಿತು ಎಲ್ಲಿಯೂ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬರೆದಿರುವ 'ಸ್ಮೃತಿವಾಹಿನಿ' ಎಂಬ ಆತ್ಮಕಥೆಯಲ್ಲಿ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ.
"ದಿನನಿತ್ಯದಂತೆ ವಿಧಾನಸೌಧದಿಂದ ಮನೆಗೆ ಬಂದೆ. ಸಂಜೆ 7.30, ಕಾಫಿ ಕುಡಿಯುತ್ತಿದ್ದೆ. ಪಾರ್ವತಮ್ಮ ರಾಜ್ಕುಮಾರ್ ಮಾತನಾಡುತ್ತಾರೆ ಎನ್ನುತ್ತಾ ಪಿ.ಎ. ಫೋನ್ ಕೊಟ್ಟ. ಪಾರ್ವತಮ್ಮ, 'ಅಣ್ಣಾ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ' ಎಂದರು. ಗಾಬರಿಯಾಗಿ 'ಏನು ಹೇಳುತ್ತಿದ್ದೀರಮ್ಮಾ' ಅಂದೆ. ನನಗೆ ಒಮ್ಮೆಲೆ ಆಕಾಶ ಕಳಚಿ ಬಿದ್ದಂತಾಗಿ ಆತಂಕ ಶುರುವಾಯಿತು. ಪರಿಸ್ಥಿತಿ ಏನಾಗುತ್ತದೋ ಅಂತ ಮನಸ್ಸಿನಲ್ಲಿಯೇ ಲೆಕ್ಕ ಹಾಕಿದೆ. ನನ್ನ ಅಳಿಯ ಸಿದ್ಧಾರ್ಥನನ್ನು ಕರೆಸಿದೆ. ಅವನ ಸೋದರ ಸಂಬಂಧಿ ಸೇನಾನಿ ಹಾಗೂ ಕೃಪಾಕರ ಅವರಿಬ್ಬರೂ ಜೆ.ಹೆಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಒಂದಷ್ಟು ದಿವಸ ವೀರಪ್ಪನ್ ಸೆರೆಯಲ್ಲಿದ್ದರು. ಇಬ್ಬರೂ ವನ್ಯಜೀವಿ ಛಾಯಾಗ್ರಾಹಕರು. ಅವರಿಗೆ ವೀರಪ್ಪನ್ ಜೊತೆ ಮಾತನಾಡುವಷ್ಟು ಸಂಪರ್ಕವಿರಬಹುದು ಎಂಬುದು ನನ್ನ ವಿಚಾರವಾಗಿತ್ತು. ಅಷ್ಟೊತ್ತಿಗೆ ಇಂಟೆಲಿಜೆನ್ಸ್ನ ಮುಖ್ಯಸ್ಥರು, ಡಿ.ಜಿ, ಗೃಹಮಂತ್ರಿ ಹಾಗೂ ಗೃಹ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಎಲ್ಲಾ ಬಂದರು. ಪಾರ್ವತಮ್ಮ ರಾಜ್ಕುಮಾರ್ ಕೂಡ ಬಂದರು. ಆಗ ರಾತ್ರಿ 1 ಗಂಟೆಯಾಗಿತ್ತು."
"ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರಿಗೆ ಫೋನ್ ಮಾಡಿದೆ. ಅವರು 'ಏನು ಮಾಡುವುದು' ಅಂತ ಕೇಳಿದರು. ನೀವೇನಾದರೂ ಮಾಡಲೇಬೇಕು, ನಾಳೆ ಬರುತ್ತೇನೆ ಅಂತ ಹೇಳಿದೆ. ಮಾರನೆ ದಿನ ಚೆನ್ನೈಗೆ ಹೋಗಿ ಕರುಣಾನಿಧಿ ಅವರನ್ನು ಭೇಟಿ ಮಾಡಿದೆ. ಅವರು ಯೋಚನೆ ಮಾಡಿ, 'ಯಾರಾದರೂ ಒಬ್ಬರನ್ನು ವೀರಪ್ಪನ್ನ ಹತ್ತಿರ ಕಳುಹಿಸಬೇಕು' ಎಂದರು. 'ನಕ್ಕೀರನ್ ಗೋಪಾಲ್ ಅಂತ ಪತ್ರಕರ್ತರಿದ್ದಾರೆ. ಅವರು ಆಗಾಗ್ಗೆ ವೀರಪ್ಪನ್ ಭೇಟಿ ಮಾಡಿ ಅವನಿಗೆ ಸಂಬಂಧಪಟ್ಟಂತೆ ಸುದ್ದಿ ಕೂಡ ಪ್ರಕಟಿಸುತ್ತಾರೆ' ಎಂದರು. ಆಗ ನಕ್ಕೀರನ್ರನ್ನು ಕರೆಸಿದೆವು. ಪ್ರಾರಂಭದಲ್ಲಿ ಅವರು ಕಾಡಿಗೆ ಹೋಗಿ ವೀರಪ್ಪನ್ ನೋಡಲಿಕ್ಕೆ ಅಂಥ ಉತ್ಸಾಹವೇನೂ ತೋರಿಸಲಿಲ್ಲ. ನಾನೇ ಅವರಿಗೆ ಪ್ರಾರ್ಥಿಸಿ, ಏನಾದರೂ ಮಾಡಿ ವೀರಪ್ಪನ್ ಸಂಪರ್ಕ ಮಾಡಪ್ಪ ಅಂತ ಕೇಳಿಕೊಂಡು ಸಂಜೆ ಬೆಂಗಳೂರಿಗೆ ಬಂದೆ".
"ಏರ್ಪೋರ್ಟ್ನಿಂದ ಮನೆಗೆ ಬರಬೇಕಾದರೆ ಬೆಂಗಳೂರಿನಲ್ಲಿ ಆಗಲೇ ಉಗ್ರ ಪ್ರತಿಭಟನೆಗಳು ಶುರುವಾಗಿದ್ದವು. ಅದನ್ನು ಕಂಟ್ರೋಲ್ ಮಾಡದೇ ಇದ್ದರೆ 1991ರಲ್ಲಿ ನಡೆದ ಕಾವೇರಿ ಜಲವಿವಾದ ಘಟನೆ ಮರುಕಳಿಸಬಹುದಿತ್ತು. ತಕ್ಷಣ ಡಿ.ಜಿ ಹಾಗೂ ಗೃಹ ಕಾರ್ಯದರ್ಶಿಗಳನ್ನು ಕರೆಸಿ, ಒಬ್ಬನೇ ಒಬ್ಬ ತಮಿಳಿಗನ ಪ್ರಾಣ ಅಥವಾ ಆಸ್ತಿ-ಪಾಸ್ತಿ ನಷ್ಟ ಆಗಬಾರದು ಎಂದು ಕಠಿಣ ನಿರ್ದೇಶನ ನೀಡಿದೆ. ಕರುಣಾನಿಧಿಯವರ ಪ್ರಯತ್ನದಿಂದಾಗಿ ನಕ್ಕೀರನ್ ಕಾಡಿಗೆ ಹೋದರು. ವೀರಪ್ಪನ್ ಭೇಟಿ ಮಾಡಿ ರಾಜ್ಕುಮಾರ್ ಆರೋಗ್ಯ ಚೆನ್ನಾಗಿದ್ದ ಬಗ್ಗೆ ಹಾಗೂ ವೀರಪ್ಪನ್ ನನಗೆ ಕಳುಹಿಸಿದ ಕ್ಯಾಸೆಟ್ವೊಂದನ್ನು ತಂದುಕೊಟ್ಟರು. ರಾಜ್ಕುಮಾರ್ ಆರೋಗ್ಯವಾಗಿದ್ದು ಪ್ರಾರ್ಥನೆ ಮಾಡುತ್ತಿದ್ದರು, ಯೋಗ ಮಾಡುತ್ತಿದ್ದರು, ಹಾಡು ಹೇಳುತ್ತಿದ್ದರು. ವೀರಪ್ಪನ್ ನನಗೆ ಕಳುಹಿಸಿದ ಕ್ಯಾಸೆಟ್ನಲ್ಲಿ 50 ಕೋಟಿ ಹಣವೂ ಸೇರಿದಂತೆ ಅನೇಕ ಡಿಮ್ಯಾಂಡ್ಗಳಿದ್ದವು. ತನ್ನ ಸಹಚರರು ಬೆಂಗಳೂರಿನ ಜೈಲಿನಲ್ಲಿದ್ದಾರೆ. ಅವರನ್ನು ಬಿಡಿ ಎಂಬ ಕಂಡೀಷನ್ ಹಾಕಿದ್ದ. 5 ಸಾರಿ ಚೆನ್ನೈಗೆ ಹೋಗಿ ಕರುಣಾನಿಧಿಯನ್ನು ಭೇಟಿ ಮಾಡಿದೆ. ಅವರೂ ಒಂದು ಸಾರಿ ಬಂದರೆ ಒಳ್ಳೆಯದು ಅಂತ, ಅವರನ್ನೂ ಬೆಂಗಳೂರು ವಿಧಾನಸೌಧಕ್ಕೆ ಕರೆಸಿದೆ. ಅನಂತರ ಮತ್ತೆ ಗೋಪಾಲನ್ನನ್ನೇ ಕಾಡಿಗೆ ಕಳುಹಿಸಲಾಯಿತು."
"ಈ ಮಧ್ಯೆ ಒಂದು ದಿನ ಬೆಂಗಳೂರಿನಲ್ಲಿ ಟೆನ್ನಿಸ್ ಮ್ಯಾಚ್ ನೋಡುತ್ತಿದ್ದೆ. ಆಗ ಒಂದು ಕರೆ ಬಂತು. ನೋಡಿದರೆ ವೀರಪ್ಪನ್ ಮಾತು. ಆಗ ನಾನು 'ರಾಜಕುಮಾರ್ ಉಟ್ಟಿಡಂಗೋ' ಅಂತ ಕೇಳಿದೆ. ಅದಕ್ಕೆ 'ಸಾಧ್ಯವಿಲ್ಲ. ನನ್ನ ಷರತ್ತು ಪಾಲಿಸಿದರೆ ಮಾತ್ರ ಬಿಡುಗಡೆ ಮಾಡುತ್ತೇನೆ. ಇಲ್ಲದಿದ್ದರೆ ಕೊಂದು ಹಾಕುತ್ತೇನೆ' ಎಂದ. ಆಮೇಲೆ ಸಮಯ ಕೇಳಿದೆ".
"ವೀರಪ್ಪನ್ಗೆ ನೆಡುಮಾರನ್ ಅವರ ಬಗ್ಗೆ ತುಂಬಾ ಗೌರವ ಇದೆ ಎಂದು ಗೊತ್ತಾಯಿತು. ಅವರನ್ನು ಭೇಟಿಯಾಗಿ ಏನಾದರೂ ಸಹಾಯ ಮಾಡಿ ಎಂದು ಹೇಳಿದೆ. ಅದಕ್ಕೆ ಅವರು 'ಬಹಳ ಕಷ್ಟವಿದೆ. ಅವನು ಸುಲಭವಾಗಿ ಯಾವುದಕ್ಕೂ ಸಿಗುವವನಲ್ಲ. ಆದರೂ ಪ್ರಯತ್ನ ಮಾಡುತ್ತೇನೆ. ಲೆಟರ್ ಕಳುಹಿಸುತ್ತೇನೆ' ಅಂದರು. ವೀರಪ್ಪನ್ ಅತ್ಯುತ್ತಮವಾದ ಸಂಪರ್ಕ ಜಾಲ ಇಟ್ಟುಕೊಂಡಿದ್ದ. ಈ ಮಧ್ಯೆ ನಮ್ಮ ಪೊಲೀಸರು ನಾಗಪ್ಪ ಮಾರಡಗಿಯನ್ನು ಹಿಡಿದುಕೊಂಡು ಬಂದರು. ರಾಜ್ಕುಮಾರ್ ಜೊತೆಗೆ ಕರೆದುಕೊಂಡು ಹೋಗಿದ್ದ ಇಬ್ಬರಲ್ಲಿ ಅವನೊಬ್ಬ, ಸಹಾಯಕ ನಿರ್ದೇಶಕ. ವೀರಪ್ಪನ್ ಜೊತೆಗೆ ಜಗಳ ಮಾಡಿ, ರಾತ್ರೋರಾತ್ರಿ ತಪ್ಪಿಸಿಕೊಂಡು ಬಂದುಬಿಟ್ಟಿದ್ದ. ಅವನು ಪ್ರತಿನಿತ್ಯ ವೀರಪ್ಪನ್ ತನ್ನ ತಾಣ ಬದಲಾಯಿಸುತ್ತಾನೆ. ಮಾಂಸಾಹಾರ ಬಿಟ್ಟು ಏನೂ ಊಟಕ್ಕೆ ದೊರೆಯುವುದಿಲ್ಲ. ವಯಸ್ಸಾದವರು ಅವನ ಜೊತೆಗಿರುವುದು ಕಷ್ಟ ಎಂದೆಲ್ಲ ಹೇಳಿದ."
"ಕರ್ನಾಟಕಕ್ಕೆ ಈ ಅಪಹರಣ ತುಂಬಾ ಪ್ರಮುಖವಾದ ವಿಚಾರ. ಹಾಗಾಗಿ ಸುದ್ದಿವಾಹಿನಿಗಳು, ವಿರೋಧ ಪಕ್ಷವರು ಎಲ್ಲರನ್ನೂ ಹ್ಯಾಂಡಲ್ ಮಾಡಬೇಕಿತ್ತು. ಹೀಗಾಗಿ ಐದು ಸಾರಿ ವಿರೋಧಪಕ್ಷದ ನಾಯಕರ ಸಭೆ ಕರೆದೆ. ಅವರ ಅಭಿಪ್ರಾಯ ಪಡೆದೇ ಮುನ್ನಡೆದೆ. ನನ್ನ ವ್ಯಕ್ತಿತ್ವದ ಭಾಗವಾಗಿರುವ ಸಂಯಮ, ಮೌನ, ತಾಳ್ಮೆ ಹಾಗೆಯೇ ನೋವನ್ನು ನುಂಗಿಕೊಳ್ಳುವುದು ಈ ಸಂದರ್ಭದಲ್ಲಿ ನನ್ನನ್ನು ಕಾಪಾಡಿದವು. ಎಂತಹುದೇ ಮಾತಿಗೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ" ಎಂದು ಕೃಷ್ಣ ಅವರು ಹೇಳಿಕೊಂಡಿದ್ದಾರೆ.
"ವೀರಪ್ಪನ್ ಸ್ಥಳೀಯ ಜನರಿಗೆ ಅಂದರೆ ಗೋಪಿನಾಥಂ ಮೊದಲಾದ ಸ್ಥಳಗಳ ಜನರಿಗೆ ಒಂದಿಷ್ಟು ಸಹಾಯ ಮಾಡಿ, ಅವರುಗಳನ್ನು ಒಲಿಸಿಕೊಂಡುಬಿಟ್ಟಿದ್ದ. ಹೀಗಾಗಿ ಅವನನ್ನು ಹಿಡಿಯುವುದು ಕಷ್ಟವಿತ್ತು. ಕರ್ನಾಟಕದಲ್ಲಿ ಪೊಲೀಸರಿಂದ ತನಿಖೆ ವೇಗ ಹೆಚ್ಚಾದರೆ ತಮಿಳುನಾಡಿಗೆ ಹೋಗುತ್ತಿದ್ದ, ತಮಿಳುನಾಡಿನಲ್ಲಿ ತನಿಖೆ ವೇಗ ಹೆಚ್ಚಾದರೆ ಕರ್ನಾಟಕಕ್ಕೆ ಬರುತ್ತಿದ್ದ. ಈ ಸಂದರ್ಭದಲ್ಲಿ ಡಾ.ಶುಭಾ, ವೀರಪ್ಪನ್ ಸಂಪರ್ಕ ಸಾಧಿಸಿ ರಾಜ್ಕುಮಾರ್ ಅವರನ್ನು ಬಿಡುಗಡೆಗೊಳಿಸಲು ಒಪ್ಪಿಸಿದ್ದರು. ಅವರು ಡಾಕ್ಟರ್ ಆಗಿ ಆತನಿಗೆ ಚಿಕಿತ್ಸೆ ಕೊಟ್ಟಿರಬಹುದು. ನಿರ್ದಿಷ್ಟ ಸ್ಥಳವೊಂದರಲ್ಲಿ ರಾಜ್ಕುಮಾರ್ ಅವರನ್ನು ವೀರಪ್ಪನ್ ನಮಗೆ ಒಪ್ಪಿಸುವುದಾಗಿ ಕೊಳತ್ತೂರು ಮಣಿ ನನಗೆ ಸಂದೇಶ ಕಳುಹಿಸಿದರು. ನಾವು ಅಲ್ಲಿಗೆ ಹೆಲಿಕಾಪ್ಟರ್ ಕಳುಹಿಸಿದೆವು. ರಾಜಕುಮಾರ್ ಬಂದರು."
"ರಾಜಕುಮಾರ್ ಅವರನ್ನು ಅಪಹರಣ ಮಾಡಿದ ನೂರಾ ಎಂಟು ದಿನಗಳ ಕಾಲ ನಾನು ಸರಿಯಾಗಿ ನಿದ್ದೆ ಮಾಡಿರಲಿಲ್ಲ. ರಾಜಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಿದಾಗ ದೊಡ್ಡ ನಿಟ್ಟುಸಿರು ಬಿಟ್ಟೆ" ಎಂದು ಎಸ್.ಎಂ.ಕೃಷ್ಣ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಎಸ್ಎಂ ಕೃಷ್ಣ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಸಂತಾಪ