ಬೆಂಗಳೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಯುವತಿಯ ಮೇಲೆ ಹಲ್ಲೆಗೈದು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಪ್ರಕರಣ ಡಿಸೆಂಬರ್ 3ರಂದು ಸಂಜಯನಗರ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ಪಶ್ಚಿಮ ಬಂಗಾಳ ಮೂಲದ ಯುವತಿ ನೀಡಿರುವ ದೂರಿನನ್ವಯ ಅಪಾರ್ಟ್‌ಮೆಂಟ್ ಮಾಲೀಕರ ಪುತ್ರ ಮಂಜುನಾಥ್ ಗೌಡ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ಯುವತಿ ಆರೋಪಿಯ ಪೋಷಕರ ಮಾಲಿಕತ್ವದ ಅಪಾರ್ಟ್‌ಮೆಂಟ್‌ನ 3ನೇ ಮಹಡಿಯಲ್ಲಿ ವಾಸವಿದ್ದರು. ಡಿಸೆಂಬರ್ 3ರಂದು ರಾತ್ರಿ 10:30ರ ಸುಮಾರಿಗೆ ತನಗೆ ಬಂದಿದ್ದ ಪಾರ್ಸೆಲ್ ಪಡೆದುಕೊಳ್ಳಲು ಗೇಟ್ ಬಳಿ ಬಂದಾಗ ಸ್ಥಳದಲ್ಲಿದ್ದ ಆರೋಪಿ ಮಂಜುನಾಥ್ ಗೌಡ, ಯುವತಿಯನ್ನು ಉದ್ದೇಶಿಸಿ ಮಾತನಾಡಿಸುತ್ತಾ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ.
ಆರೋಪಿ ಪಾನಮತ್ತನಾಗಿದ್ದರಿಂದ ತನ್ನ ಪಾಡಿಗೆ ತಾನು ಪಾರ್ಸೆಲ್ ಪಡೆದುಕೊಂಡಿದ್ದ ಯುವತಿ ವಾಪಸಾಗಲು ಪ್ರಯತ್ನಿಸಿದ್ದಾಳೆ. ಈ ವೇಳೆ ಯುವತಿಯ ಕಪಾಳಕ್ಕೆ ಹೊಡೆದಿದ್ದ ಆರೋಪಿ, ಕುತ್ತಿಗೆ ಹಿಡಿದು ಗೋಡೆಯತ್ತ ತಳ್ಳಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ಯುವತಿಯನ್ನ ತನ್ನ ಮನೆಯತ್ತ ಎಳೆದುಕೊಳ್ಳಲು ಯತ್ನಿಸಿದ್ದಾನೆ. ತಪ್ಪಿಸಿಕೊಂಡು ಓಡಿದಾಗ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ವಿವರಿಸಿದ್ದಾಳೆ. ಅಲ್ಲದೆ ಗಲಾಟೆಯಾದ ದಿನ ಬೆಳಗ್ಗೆ ತನ್ನ ಮನೆಯ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಆರೋಪಿ, 'ಮನೆಯೊಳಗೆ ಬರಬಹುದೇ?' ಎಂದು ಪ್ರಶ್ನಿಸಿದ್ದ. ಅದಕ್ಕೆ ತಾನು ನಿರಾಕರಿಸಿದ್ದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸದ್ಯ ಯುವತಿ ನೀಡಿರುವ ದೂರಿನನ್ವಯ ಆರೋಪಿ ಮಂಜುನಾಥ್ ಗೌಡ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ದೂರು ನೀಡಿದ ನಂತರವೂ ಆರೋಪಿ ಮಂಜುನಾಥ್ ಗೌಡ ತನ್ನ ಮನೆ ಬಳಿ ಬಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ವಿಡಿಯೋ ಮುಖಾಂತರ ಆರೋಪಿಸಿದ್ದಾಳೆ.
ಇದನ್ನೂ ಓದಿ: ಚಿಕ್ಕಮಗಳೂರು: ಗೃಹಿಣಿಯನ್ನು ಮಕ್ಕಳೆದುರೇ ಚೂರಿಯಿಂದ ಇರಿದು, ಸಾಯದೇ ಇದ್ದಾಗ ಕೆರೆಗೆ ಎಸೆದ ಪ್ರಿಯಕರ!