ಬೆಳಗಾವಿ: ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಪೊಲೀಸರು ತಪಾಸಣೆ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳು ಹಾಗೂ ಒಂದು ಅಲ್ಟೋ ಕಾರನ್ನು ವಶಕ್ಕೆ ಪಡೆಯಲಾಗಿದೆ. ಗೋಣಿ ಚೀಲದಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಹಣದ ಕಟ್ಟುಗಳಿಗೆ ಕಪ್ಪು ಬಣ್ಣದ ಕವರ್ ಹಾಕಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಿಸಂಹಿತೆ ಪಾಲನೆಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ: ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವುದರಿಂದ ತಕ್ಷಣದಿಂದಲೇ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಮಾದರಿ ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ನಡೆಸಿದರು. ಸಭೆ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಏಪ್ರಿಲ್ 12ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19ರಂದು ಕೊನೆಯ ದಿನಾಂಕವಾಗಿದೆ. ಏಪ್ರಿಲ್ 20ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 22ರಂದು ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನವಾಗಿದ್ದು, ಮೇ 5ರಂದು ಮತದಾನ, ಜೂ.6 ರಂದು ಮತ ಎಣಿಕೆ ನಡೆಯಲಿದೆ. ಜೂ.6ರಂದು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.
ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆಗೆ 36 ಲಕ್ಷ 45 ಸಾವಿರದ 853 ಮತದಾರರಿದ್ದು, ಚಿಕ್ಕೋಡಿ ಲೋಕಸಭೆಯಲ್ಲಿ ಒಟ್ಟು 17 ಲಕ್ಷ 41 ಸಾವಿರದ 758 ಮತದಾರರಿದ್ದಾರೆ. ಬೆಳಗಾವಿ ಲೋಕಸಭೆಗೆ ಒಟ್ಟು 19 ಲಕ್ಷ 4 ಸಾವಿರದ 99 ಜನ ಮತದಾರರಿದ್ದಾರೆ. ಕೆನರಾ ಲೋಕಸಭೆ ವ್ಯಾಪ್ತಿಗೆ ಬರುವ ಕಿತ್ತೂರು, ಖಾನಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ 4 ಲಕ್ಷ 16 ಸಾವಿರ ಮತದಾರರು ಇದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 4524 ಮತಗಟ್ಟೆಗಳಿವೆ. ಚುನಾವಣೆ ಅಕ್ರಮ ತಡೆಗೆ 64 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ಆಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಾಹೀರಾತು ತೆರವಿಗೆ ಸೂಚನೆ: ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಲೋಕಸಭಾ ಚುನಾವಣೆ ಘೋಷಣೆ ಆಗಿರುವುದರಿಂದ ಮಾದರಿ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿರುತ್ತದೆ. ಆದ್ದರಿಂದ ಸರ್ಕಾರ, ರಾಜಕೀಯ ಪಕ್ಷಗಳ ಜಾಹೀರಾತು, ಚುನಾವಣಾ ಸಂಬಂಧಿತ ಎಲ್ಲ ಬಗೆಯ ಜಾಹೀರಾತುಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕ ಸ್ಥಳದಲ್ಲಿರುವ ಭಿತ್ತಿಪತ್ರ, ಗೋಡೆಬರಹ, ಬ್ಯಾನರ್, ಕಟೌಟ್ ಗಳನ್ನು 24 ಗಂಟೆಗಳಲ್ಲಿ ತೆರವು ಮಾಡಬೇಕು. ಪ್ರವಾಸಿ ಮಂದಿರದಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ ಆಯಾ ತಹಶೀಲ್ದಾರರು ಪ್ರವಾಸಿ ಮಂದಿರಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಯಾವುದೇ ರೀತಿಯ ಟೆಂಡರ್ ಆಹ್ವಾನ, ವರ್ಗಾವಣೆಗಳಿಗೆ ನಿರ್ಬಂಧವಿರುತ್ತದೆ. ಸರ್ಕಾರಿ ಅಧಿಕಾರಿಗಳು ಅನಗತ್ಯವಾಗಿ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡುವಂತಿಲ್ಲ. ರಾಜಕೀಯ ಸಭೆ-ಸಮಾರಂಭಗಳಿಗೆ ಸುವಿಧಾ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮತಿ ನೀಡಬೇಕು. ರಾಜಕೀಯ ಸಭೆ-ಸಮಾರಂಭಗಳನ್ನು ನಡೆಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕೂಡಲೇ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸಿದ ಕುಮಾರಸ್ವಾಮಿ: ಚುನಾವಣೆ ಧರ್ಮಯುದ್ಧ ಇದ್ದಂತೆ ಎಂದ ಡಾ.ಮಂಜುನಾಥ್