ತುಮಕೂರು: ಹಾಡಹಗಲೇ ತೋಟದ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ 3 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಉರ್ಕಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಗಯ್ಯ (56) ಎಂಬವರು ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ: ಗಂಗಯ್ಯ ಮತ್ತು ಕುಟುಂಬ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಉರ್ಕಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬೈಕ್‌ನಲ್ಲಿ ಇವರ ಮನೆಗೆ ಬಂದಿದ್ದ ಇಬ್ಬರು ದರೋಡೆಕೋರರು, ಮನೆಯಲ್ಲಿದ್ದ ಪುಷ್ಪಲತಾ ಅವರಲ್ಲಿ ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ ಪುಷ್ಪಲತಾ ತನ್ನ ತಾಯಿ ಗಂಗಮ್ಮ ಅವರಿಗೆ, ಯಾರೋ ಕುಡಿಯಲು ನೀರು ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗಂಗಮ್ಮ ಕುಡಿಯಲು ನೀರು ತರಲೆಂದು ಮನೆಯೊಳಗೆ ಹೋಗುತ್ತಿದ್ದಂತೆ ದರೋಡೆಕೋರರು ಏಕಾಏಕಿ ಮನೆಯೊಳಗೆ ನುಗ್ಗಿ ಮೂರು ಲಕ್ಷ ರೂಪಾಯಿ ನಗದು ದೋಚಲು ಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಪುಷ್ಪಲತಾ ಪ್ರತಿರೋಧ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಲಗಿದ್ದ ತಂದೆ ಗಂಗಯ್ಯ ಎಚ್ಚರಗೊಂಡು ನೋಡಿದಾಗ ದರೋಡೆಕೋರರು ಹಣವನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಮನೆಯವರು ಪ್ರತಿಭಟಿಸಿದಾಗ ಓರ್ವ ದರೋಡೆಕೋರ ಗಂಗಯ್ಯನವರ ಮೇಲೆ ಗುಂಡು ಹಾರಿಸಿದ್ದಾನೆ. ಆ ಗುಂಡು ಗಂಗಯ್ಯರಿಗೆ ತಗಲುವ ಬದಲು ಗೋಡೆಗೆ ತಗುಲಿದೆ. ಬಳಿಕ ಮನೆಯಿಂದ ಪರಾರಿಯಾಗಲು ಯತ್ನಿಸಿದ ದರೋಡೆಕೋರರನ್ನು ಗಂಗಯ್ಯ ಹಿಂಬಾಲಿಸಿದಾಗ ಮತ್ತೆ ಎರಡನೇ ಬಾರಿ ಗುಂಡು ಹಾರಿಸಿದ್ದಾರೆ. ಆ ಗುಂಡು ಗಂಗಯ್ಯನವರ ಕಾಲಿಗೆ ತಗುಲಿ ಗಾಯವಾಗಿದೆ. ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್ಪಿ ಅಶೋಕ್, ಡಿವೈಎಸ್‌ಪಿ ಓಂಪ್ರಕಾಶ್ ಪರಿಶೀಲನೆ ನಡೆಸಿದರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.