ಬೆಂಗಳೂರು: ಬಹಳ ವಯಸ್ಸು ಆದ್ರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಫ್ಯಾಮಿಲಿ ಜೊತೆ ಕಾಲ ಕಳೆಯಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭೆ, ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ ಆದ್ಯತೆ ನೀಡಿ ಎಂದು ಶಾಮನೂರು ಶಿವಶಂಕರಪ್ಪ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅವರು ವಯಸ್ಸಿನಲ್ಲಿ ಹಿರಿಯರು. 94 ವರ್ಷದ ವಯಸ್ಸು ಅವರಿಗೆ ಏನು ಅರ್ಥ ಆಗುತ್ತೋ ಏನು ಬರೆಯುತ್ತಾರೋ ಗೊತ್ತಿಲ್ಲ. ವಯಸ್ಸು ಜಾಸ್ತಿ ಆಗಿರೋದ್ರಿಂದ ಏನೇನೋ ಹೇಳ್ತಾ ಇರ್ತಾರೆ. ಲಿಂಗಾಯತ ಮಹಾಸಭಾದಿಂದ ಯಾರು ಪತ್ರ ಬರೆಯುತ್ತಿಲ್ಲ. ಕೇವಲ ಶಾಮನೂರು ಅವರು ಪತ್ರ ಬರೆದಿದ್ದಾರೆ. ಅವರ ಬಗ್ಗೆ ನಾನು ಏನು ಕಾಮೆಂಟ್ ಮಾಡುವುದಕ್ಕೆ ಸಾಧ್ಯ?. ಅವರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳಿಂದ ಅವರು ಆಯ್ಕೆ ಆಗ್ತಾರೆ. ಆ ವಿಚಾರ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.
ಈ ಹಿಂದೆ ರಾಘವೇಂದ್ರ ಅವರು ಗೆಲ್ಲಬೇಕೆಂದು ಹೇಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಅಷ್ಟು ವಯಸ್ಸಾದ ಮೇಲೆ ಬಹಳಷ್ಟು ವಿಷಯಗಳು ಅರ್ಥ ಆಗೋದಿಲ್ಲ. ರಾಜಕೀಯ ವಿದ್ಯಮಾನಗಳು ಅರ್ಥ ಆಗಲ್ಲ. ಆ ವಯಸ್ಸಿನವರಿಗೆ ನಾವು ಕೂಡ ಜೋರಾಗಿ ಹೇಳಕ್ಕೆ ಆಗೋದಿಲ್ಲ. ನಾವು ಕೂಡ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ಆ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿದ್ರೆ ಇಂತಹ ಸಮಸ್ಯೆ ಬರ್ತಾ ಇರುತ್ತೆ ಎಂದರು.
ಶಾಸಕ ಗೋಪಾಲಯ್ಯಗೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬೆದರಿಕೆ ಯಾರಾದ್ರೂ ಹಾಕಿದ್ರೆ, ದೂರು ಕೊಟ್ಟಾಗ ಕ್ರಮ ತೆಗೆದುಕೊಳ್ಳದಿದ್ರೆ, ಆಗ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ಹೇಳಲಿ. ಏನು ನಡೆದಿದೆ ಅನ್ನೋದು ಗೊತ್ತಿಲ್ಲ. ಕೊಲೆ ಬೆದರಿಕೆ ಹಾಕೋದು ಸರಿಯಲ್ಲ. ಪೊಲೀಸರಿಗೆ ಅವರು ದೂರು ಕೊಡಲಿ. ಯಾರೇ ದೂರು ಕೊಟ್ಟರೂ ಪೊಲೀಸರು ಗಂಭೀರವಾಗಿ ಆ್ಯಕ್ಷನ್ ತೆಗೆದುಕೊಳ್ತಾರೆ. ಅವರು ದೂರು ಕೊಡದೇ ಮನೆಯಲ್ಲಿದ್ರೆ ರಾಜಕೀಯ ಪ್ರೇರಿತ ಅಂತ ಹೇಳಲು ಸರಿಯಲ್ಲ ಎಂದರು.
ಸಂಪುಟ ಸ್ಥಾನಮಾನ ವಿಚಾರವಾಗಿ ಪ್ರತಿಕ್ರಿಯಿಸಿ, 70 ಜನ ಶಾಸಕರಿಗೆ ಕ್ಯಾಬಿನೆಟ್ ರ್ಯಾಂಕ್ ಕೊಟ್ಟಿದೆ ಅಂತ ಕೇಂದ್ರ ದುಡ್ಡು ಕೊಡುತ್ತಿಲ್ಲವಾ?. ಆಡಳಿತ ದೃಷ್ಟಿಯಿಂದ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಇದರಿಂದ ದುಂದುವೆಚ್ಚ ಆಗ್ತಿಲ್ಲ. ಆದ್ರೆ ಕೇಂದ್ರ ಯಾಕೆ ಅನುದಾನ ತಾರತಮ್ಯ ಮಾಡುತ್ತಿದೆ. ಜಿಎಸ್ಟಿ ಪರಿಹಾರ ಯಾಕೆ ಕೊಡುತ್ತಿಲ್ಲ. ಇದರ ಬಗ್ಗೆ ಮಾತಾಡಬೇಕು, ಉತ್ತರ ಕೊಡಬೇಕು. ಹಿಂದೂ, ಮುಸ್ಲಿಂ ಬಗ್ಗೆ ಮಾತಾಡಲು ಆಗುತ್ತೆ. ಆದ್ರೆ ಈ ವಿಚಾರ ಯಾಕೆ ಮಾತಾಡಲು ಆಗಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸುಳ್ಳುರಾಮಯ್ಯ, ಒಂದು ರೂಪಾಯಿ ಜಿಎಸ್ಟಿ ಬಾಕಿಯಿಲ್ಲ: ಜೋಶಿ ವಾಗ್ದಾಳಿ