ಹಾವೇರಿ: ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿದೆ. ಹಾವೇರಿ ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು, ಹಲವು ನದಿಗಳು ಮೈದುಂಬಿವೆ.
ಸವಣೂರು ತಾಲೂಕಿನ ಕಳಸೂರು ಮತ್ತು ಹಾವೇರಿಯನ್ನು ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಿದೆ. ಹಲವು ಗ್ರಾಮಗಳಿಗೆ ರಸ್ತೆ ಬಂದ್ ಆಗಿದೆ. ಈ ಗ್ರಾಮಗಳು ಹಾವೇರಿ ಜಿಲ್ಲಾಡಳಿತ ಕಚೇರಿಯೊಂದಿಗೆ ಸಂಪರ್ಕ ಕಳೆದುಕೊಂಡಿವೆ.
ಹಾವೇರಿ, ಕಳಸೂರು, ತೊಂಡೂರು ಹೊಸಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಈ ಸೇತುವೆ ಕಂ ಬ್ಯಾರೇಜ್ ಮಾರ್ಗವನ್ನೇ ಅವಲಂಬಿಸಿದ್ದಾರೆ. ಸೇತುವೆ ಮುಳುಗಿರುವುದರಿಂದ ಜನರು ಕರ್ಜಗಿ ಮಾರ್ಗವಾಗಿ ಸುಮಾರು 25 ಕಿ.ಮೀ.ಗೂ ಹೆಚ್ಚು ದೂರ ಸುತ್ತು ಹಾಕಿ ಹಾವೇರಿಗೆ ಬರಬೇಕಿದೆ.
ವರದಾ ನದಿ ನೀರು ಕಳಸೂರು ಸೇತುವೆ ಮೇಲೆ ಹರಿಯುತ್ತಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಅಪಾಯ ಲೆಕ್ಕಿಸದೆ ಹರಿಯುತ್ತಿರುವ ನೀರಿನ ಮಧ್ಯೆಯೇ ಸೇತುವೆ ದಾಟುತ್ತಿದ್ದಾರೆ.
''ಕಳಸೂರು ಗ್ರಾಮದ ಬಳಿ ನಮ್ಮ ಜಮೀನುಗಳಿವೆ. ದೇವಗಿರಿ ಗ್ರಾಮದವರಾದ ನಾವು, ಜಮೀನುಗಳಿಗೆ ಕಳಸೂರು ಸೇತುವೆ ದಾಟಬೇಕಾದ ಪರಿಸ್ಥಿತಿಯಿದೆ. ನಾವು ಎತ್ತು, ಚಕ್ಕಡಿಗಳೊಂದಿಗೆ ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ಧೈರ್ಯ ಮಾಡಿ ಹೇಗೋ ಸೇತುವೆ ದಾಟುತ್ತಿದ್ದೇವೆ'' ಎಂದು ರೈತರೊಬ್ಬರು ಆತಂಕ ವ್ಯಕ್ತಪಡಿಸಿದರು.
''ಮಳೆಗಾಲ ಬಂದಾಗ ಇದು ನಮ್ಮ ಪರಿಸ್ಥಿತಿ. ಸೇತುವೆ ಕಂ ಬ್ಯಾರೇಜ್ ಎತ್ತರಿಸಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ" ಎಂದು ಕಳಸೂರು ಗ್ರಾಮಸ್ಥರೊಬ್ಬರು ದೂರಿದರು.
''ಮಳೆ ಕಡಿಮೆಯಾಗುವವರೆಗೆ ಈ ಸಮಸ್ಯೆ ಇದೇ ರೀತಿ ಇರುತ್ತದೆ. ಸೇತುವೆ ಎತ್ತರಿಸಿದರೆ ಬಾಂದಾರದಲ್ಲಿ ಅಧಿಕ ನೀರು ಸಂಗ್ರಹವಾಗುತ್ತದೆ. ಸೇತುವೆ ಮೇಲೆ ಓಡಾಡಲು ಅನುಕೂಲವಾಗುತ್ತದೆ'' ಎಂದು ಸ್ಥಳೀಯರು ತಿಳಿಸಿದರು.