ಉಡುಪಿ: ಉಡುಪಿ ಗ್ಯಾಂಗ್ ವಾರ್ ಕೇಸ್ನ ಆರೋಪಿಗಳಿಬ್ಬರು ಹಿರಿಯಡ್ಕ ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ದಾಂಧಲೆ ನಡೆಸಿ, ಜಿಲ್ಲಾ ಅಧೀಕ್ಷಕರು, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಿನ್ನೆ (ಜೂ. 24 ರಂದು) ನಡೆದಿದೆ.
ಕಾರಾಗೃಹದಲ್ಲಿರುವ ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೇನ್ ಪಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲರ್ ಎಸ್. ಎ. ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ. ಅಲ್ಲದೆ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಅರಂಭಿಸಿ ಸಿಬ್ಬಂದಿಯನ್ನು ತಳ್ಳಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಬಳಿಕ ಅಡುಗೆ ಕೋಣೆಯಲ್ಲಿರುವ ದೊಡ್ಡ ಸೌಟ್, ಚಹಾ ಮಾಡುವ ಸೌಟ್ನ್ನು ತಂದು ಹಾಗೂ ಮುಹಮ್ಮದ್ ಸಕ್ಲೇನ್ ತನ್ನ ಕೊಠಡಿಯ ಮರದ ಕುರ್ಚಿಯನ್ನು ತೆಗೆದುಕೊಂಡು ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದನೆಂದು ದೂರಲಾಗಿದೆ. ಈ ವೇಳೆ ಆರೋಪಿಗಳನ್ನು ಜೈಲು ಸಿಬ್ಬಂದಿ ಸೆರೆಹಿಡಿದರು. ಅಲ್ಲದೆ ಕರ್ತವ್ಯದಲ್ಲಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ಧರಾಮ ಬಿ. ಪಾಟೀಲ್ ಹಾಗೂ ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತ್ನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರು ದಾಖಲಾಗಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹುಬ್ಬಳ್ಳಿಯ ಆಕಾಶ ಮಠಪತಿ ಅನುಮಾನಾಸ್ಪದ ಸಾವು ಪ್ರಕರಣ: 8 ಜನ ನ್ಯಾಯಾಂಗ ಬಂಧನಕ್ಕೆ - Akash Mathapati death case