ಬೆಂಗಳೂರು: ರೇಣುಕಾಸ್ವಾಮಿ ಕೊಲೆಗೂ ಮುನ್ನ ಆರ್.ಆರ್. ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ದರ್ಶನ್ ಹಾಗೂ ಅವರ ಸಹಚರರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ರೆಸ್ಟೋರೆಂಟ್ಗೆ ಕರೆತಂದು ಸ್ಥಳ ಮಹಜರು ನಡೆಸಿದರು. ಈ ವೇಳೆ ಬಾರ್ನಲ್ಲಿ ಏನೆಲ್ಲಾ ಮಾತುಕತೆ ನಡೆಸಲಾಗಿತ್ತು. ಏನೆಲ್ಲಾ ಸೇವಿಸಲಾಗಿತ್ತು ಎಂಬುದು ಸೇರಿದಂತೆ ಹಲವು ಮಾಹಿತಿಗಳನ್ನ ಪೊಲೀಸರು ಕಲೆ ಹಾಕಿದರು.
ಪಾರ್ಟಿಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸಿಕೊಂಡಿರುವ ಪೊಲೀಸರು, ನಟ ದರ್ಶನ್ ಅವರೊಂದಿಗೆ ಚಿಕ್ಕಣ್ಣ ಅವರನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ. ಜೂನ್ 8ರಂದು ದರ್ಶನ್, ಪ್ರದೋಷ್, ವಿನಯ್, ಪವನ್ ಸೇರಿದಂತೆ ಕೆಲ ಆರೋಪಿಗಳು ಪಾರ್ಟಿ ಮಾಡಿದ್ದರು. ಆರ್.ಆರ್. ನಗರದ ನಿವಾಸಿಯಾಗಿರುವ ಚಿಕ್ಕಣ್ಣ ಸಹ ಅಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಆರೋಪಿಗಳು ಕೊಲೆಗೂ ಮುನ್ನ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಷ್ಟು ಗಂಟೆಗೆ ಬಂದರು, ಎಷ್ಟು ಗಂಟೆಗೆ ರೆಸ್ಟೋರೆಂಟ್ನಿಂದ ನಿರ್ಗಮಿಸಿದರು ಎಂಬುದರ ಬಗ್ಗೆ ಗೊತ್ತಾಗಿದೆ. ಹೀಗಾಗಿ ದರ್ಶನ್ ಹಾಗೂ ಸಹಚರರನ್ನು ಕರೆದೊಯ್ದು ಮಹಜರು ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಸ್ಥಳ ಮಹಜರು: ಮತ್ತೊಂದೆಡೆ, ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜು ಅವರು ರೇಣುಕಾಸ್ವಾಮಿ ಕೊಲೆ ಬಳಿಕ ಹಳೇ ಬಟ್ಟೆ ಕಳಚಿ ಹೊಸ ಬಟ್ಟೆ ತೊಡಿಸಿದ್ದ ಎಂಬ ಮಾಹಿತಿ ಹಿನ್ನೆಲೆ ಅವರನ್ನು ಬಟ್ಟೆ ಅಂಗಡಿಗೆ ಕರೆದೊಯ್ದು ಮಹಜರು ನಡೆಸಿದರು. ಆರೋಪಿಗಳು ಕೊಲೆ ಬಳಿಕ ಆರ್.ಆರ್. ನಗರದ ಐಡಿಯಲ್ ಹೋಮ್ ಬಳಿಯಿರುವ ಟ್ರೆಂಡ್ಸ್ ಶಾಪ್ಗೆ ಹೋಗಿ ಹೊಸ ಬಟ್ಟೆ ಖರೀದಿಸಿದ್ದರು.
ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಚಿಕ್ಕಣ್ಣ: ಮಹಜರು ನಂತರ ದರ್ಶನ್, ಚಿಕ್ಕಣ್ಣ, ವಿನಯ್, ಪ್ರದೋಷ್ ಸೇರಿದಂತೆ ಆರು ಮಂದಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತರಲಾಗಿದೆ. ಇನ್ನು, ಪೊಲೀಸರು ಚಿಕ್ಕಣ್ಣನನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಪೊಲೀಸರು ಚಿಕ್ಕಣ್ಣನನ್ನು ಸಾಕ್ಷಿಯಾಗಿ ಪರಿಗಣಿಸಲಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆ ಮುಗಿಸಿ ಹೊರಬಂದ ಚಿಕ್ಕಣ್ಣ ಹೇಳಿದ್ದೇನು: ಅನ್ನಪೂಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಹಾಸ್ಯ ನಟ ಚಿಕ್ಕಣ್ಣ, ಹೊರಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದರು. ರಾಜರಾಜೇಶ್ವರಿನಗರದಲ್ಲಿ ಇರುವ ಸ್ಟೋನಿ ಬ್ರೂಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕರೆದಿದ್ದರು. ಆಗ ಅಲ್ಲಿಗೆ ಹೋಗಿದ್ದೆ. ಇದರ ಬಗ್ಗೆ ವಿಚಾರಣೆ ನಡೆಸುವ ಉದ್ದೇಶಕ್ಕೆ ಪೊಲೀಸರು ನೋಟಿಸ್ ಕೊಟ್ಟಿದ್ದರು. ತನಿಖೆಗೆ ಸಹಕರಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎನ್ನುತ್ತ ಸ್ಥಳದಿಂದ ತೆರಳಿದರು.
ಇದನ್ನೂ ಓದಿ: ರಾಜಕಾಲುವೆಯಲ್ಲಿ ಬಿಸಾಕಿದ್ದ ರೇಣುಕಾಸ್ವಾಮಿ ಮೊಬೈಲ್ಗಾಗಿ ಪೊಲೀಸರ ತಲಾಶ್ - Search For Renukaswamy Mobile