ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ 13 ಜನರು ಬಂಧಿತರಾಗಿದ್ದಾರೆ. ಬಂಧಿತರಲ್ಲಿ ದರ್ಶನ್ ಅವರ ಆಪ್ತ ನಾಗರಾಜ್ ಎಂಬವರೂ ಕೂಡ ಇದ್ದು, ಇವರು ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
41 ವರ್ಷದ ನಾಗರಾಜ್ ಅವರು ಟಿ.ನರಸೀಪುರ ಮೂಲದವರಾಗಿದ್ದು, ಹಲವು ವರ್ಷಗಳಿಂದ ಮೈಸೂರಲ್ಲಿ ವಾಸವಾಗಿದ್ದಾರೆ. ಕಳೆದ ಸುಮಾರು 15 ವರ್ಷಗಳಿಂದ ದರ್ಶನ್ ಅವರಿಗೆ ಆಪ್ತರಾಗಿದ್ದಾರೆ. ಅಷ್ಟೇ ಅಲ್ಲ, ದರ್ಶನ್ ಅವರ ಮ್ಯಾನೇಜರ್ ಆಗಿ, ಅವರ ತೋಟ ಹಾಗೂ ಎಲ್ಲಾ ಖಾಸಗಿ ಕೆಲಸಗಳನ್ನು ಇವರು ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕೊಲೆ ಪ್ರಕರಣದಲ್ಲಿ ಸದ್ಯ ಬಂಧಿತ ಆರೋಪಿಯಾಗಿರುವ ನಾಗರಾಜ್ ಅವರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ: ರಾಜ್ಯ ಕುರುಬರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧಿಸಿ ನಾಗರಾಜ್ ಗೆದ್ದಿದ್ದರು. ಅವರ ಈ ಅಧಿಕಾರವಧಿ ಮೂರು ತಿಂಗಳಲ್ಲಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ನಟ ದರ್ಶನ್ ಅವರ ಬೆಂಬಲದಿಂದ ಪಕ್ಷವೊಂದರ ಟಿಕೆಟ್ ಪಡೆದು ರಾಮಕೃಷ್ಠ ನಗರ ಅಥವಾ ಗಂಗೋತ್ರಿ ಬಡಾವಣೆಯಿಂದ ಚುನಾವಣೆಗೆ ನಿಲ್ಲಲು ಮುಂದಾಗಿದ್ದರು. ಈಗಲೂ ಕೂಡ ಕೊಲೆ ಪ್ರಕರಣದಿಂದ ಹೊರಬಂದರೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಕುರುಬರ ಸಂಘದ ಪದಾಧಿಕಾರಿಗಳು 'ಈಟಿವಿ ಭಾರತ್'ಗೆ ಮಾಹಿತಿ ನೀಡಿದರು.
ಕಳೆದ ವರ್ಷ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತವೆಂದು ಗುರುತಿಸಲ್ಪಟ್ಟ ಪಟ್ಟೆ ತಲೆಯ ಹೆಬ್ಬಾತು ಪಕ್ಷಿಯನ್ನು ದರ್ಶನ್ ತೋಟದ ಮನೆಯಲ್ಲಿ ಕೂಡಿ ಹಾಕಿದ ಸಂಬಂಧ ಅರಣ್ಯಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿಯೂ ನಾಗರಾಜ್ ಆರೋಪಿಯಾಗಿದ್ದರು. ಜೊತೆಗೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ವಿರುದ್ಧವೂ ಪ್ರಕರಣ ದಾಖಾಲಾಗಿತ್ತು. ಈ ಪ್ರಕರಣದ ಎಫ್ಐಆರ್ನಲ್ಲಿ ನಾಗರಾಜ್ ವ್ಯವಸ್ಥಾಪಕ ಎಂದು ಉಲ್ಲೇಖ ಮಾಡಲಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಆತನ ಮೇಲೆ ಹಲ್ಲೆ ಮಾಡಿ ಕೊಲೆಗೈದ ಸಂಬಂಧ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಜೂನ್ 17ರವರೆಗೆ ಪೊಲೀಸರು ಕಸ್ಡಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.