ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ಆರೋಪದಡಿ ಕೊಲೆಯಾದ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ನಗರಕ್ಕೆ ಕರೆಸಿಕೊಂಡ ಆರೋಪಿಗಳು, ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಹತ್ಯೆಗೈದಿದ್ದರು. ಬಳಿಕ ಶವವನ್ನು ಸುಮನಹಳ್ಳಿಯ ಮೋರಿಗೆ ಬಿಸಾಡಿದ್ದರು. ಘಟನೆಯ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಶವದ ಗುರುತು ಪತ್ತೆ ಮಾಡಿ ರೇಣುಕಾಸ್ವಾಮಿ ಎಂದು ದೃಢಪಡಿಸಿದ್ದರು. ಬಲವಾದ ವಸ್ತುವಿನಿಂದ ಹಲ್ಲೆ ಮಾಡಿರುವ ಗುರುತುಗಳು ಪತ್ತೆಯಾಗಿದ್ದರಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಪೊಲೀಸರ ಕೈ ಸೇರಬೇಕಿದೆ.
ರೇಣುಕಾಸ್ವಾಮಿಯ ಶವದ ಮೇಲೆ 15ಕ್ಕಿಂತ ಹೆಚ್ಚಿನ ಗುರುತುಗಳು ಪತ್ತೆಯಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹತ್ಯೆ ನಡೆದ ಸ್ಥಳಕ್ಕೆ ವಿಧಿ ವಿಜ್ಞಾನ (ಎಫ್ಎಸ್ಎಲ್) ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಗರೇಟ್ ತುಂಡುಗಳು, ಆಯುಧ ಒಳಗೊಂಡಂತೆ ಇತರೆ ವಸ್ತುಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ.
ಠಾಣೆಯೆದುರು ದರ್ಶನ್ ಅಭಿಮಾನಿಗಳ ಜೈಕಾರ: ಈ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕಾಮಾಕ್ಷಿಪಾಳ್ಯ ಠಾಣೆ ಮುಂದೆ ನಟನ ಅಭಿಮಾನಿಗಳು ಬಾಸ್..ಬಾಸ್..ಡಿ ಬಾಸ್ ಎಂದು ಜೈಕಾರ ಕೂಗಿದ್ದಾರೆ.