ಬೆಂಗಳೂರು: ಆರೋಪಿಗಳ ವಿರುದ್ಧ ಗಡಿಪಾರು ಮಾಡುವಂತಹ ಆದೇಶಗಳನ್ನು ಹೊರಡಿಸುವುದಕ್ಕೂ ಮುನ್ನ ಯಾವ ಆಧಾರದ ಮೇಲೆ ಗಡಿಪಾರು ಆದೇಶ ಹೊರಡಿಸಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಸಮೇತ ಆರೋಪಿಗೆ ತಲುಪಿಸಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಮೈಸೂರಿನ ಎಂ.ಆರ್.ಸಚಿನ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಸೂಕ್ತ ಕಾರಣ ನೀಡದೆ ಅರ್ಜಿದಾರರ ಗಡಿಪಾರಿಗೆ ಉಪ ವಿಭಾಗಾಧಿಕಾರಿ 2024ರ ಮಾ.20ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿ ಆದೇಶಿಸಿದೆ.
ಯಾವ ವ್ಯಕ್ತಿಯ ವಿರುದ್ಧ ಗಡಿಪಾರು ಆದೇಶಗಳನ್ನು ಹೊರಡಿಸಲಾಗುತ್ತದೆಯೋ ಅಂತಹ ವ್ಯಕ್ತಿಗೆ ನಿಯಮದಲ್ಲಿ ಸಾಕಷ್ಟು ರಕ್ಷಣೆ ಇದೆ. ಆ ರಕ್ಷಣೆಗಳಲ್ಲಿ ಸ್ವಾತಂತ್ರ್ಯದ ಹಕ್ಕೂ ಇದೆ. ಆ ಪ್ರಕಾರ ಈ ಪ್ರಕರಣದಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 58ರಡಿ ಯಾವ ವ್ಯಕ್ತಿಯ ವಿರುದ್ಧ ಗಡಿಪಾರು ಆದೇಶಗಳನ್ನು ಹೊರಡಿಸಲಾಗಿರುತ್ತದೆಯೋ ಅಂತಹ ವ್ಯಕ್ತಿಗೆ ಸಾಕಷ್ಟು ಅವಕಾಶಗಳನ್ನು ನೀಡಬೇಕಾಗುತ್ತದೆ. ಆ ವ್ಯಕ್ತಿಗೆ ಏಕೆ ಅಂತಹ ಆದೇಶ ಹೊರಡಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು. ಆ ನಂತರ ಆ ವ್ಯಕ್ತಿಯ ಅಹವಾಲು ಆಲಿಸಬೇಕು. ಮತ್ತು ಆದೇಶ ಹೊರಡಿಸಿದ ನಂತರ ಸರ್ಕಾರ ಮೇಲ್ಮನವಿ ಸಲ್ಲಿಸಲು 30 ದಿನ ಕಾಲಾವಕಾಶ ನೀಡಬೇಕು ಎಂದು ಪೀಠ ಹೇಳಿದೆ.
ಪ್ರಸಕ್ತ ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾದ ಉಪ ವಿಭಾಗಾಧಿಕಾರಿ, ನಿಯಮಗಳನ್ನು ಮೀರಿ ಆದೇಶ ಹೊರಡಿಸಿದ್ದಾರೆ. ಅವರ ಆದೇಶ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಆತನ ವಿರುದ್ಧ ಅಪರಾಧ ಪ್ರಕರಣಗಳು ಬಾಕಿ ಇವೆ ಎನ್ನುವ ಕಾರಣಕ್ಕೆ ಆದೇಶ ಹೊರಡಿಸುವುದು ಸರಿಯಲ್ಲ. ಆತ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿಲ್ಲ. ನೆಪ ಮಾತ್ರಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರನ್ನು ಉಪವಿಭಾಗಾಧಿಕಾರಿ 2024ರ ಮಾ.20ರಿಂದ ಅನ್ವಯವಾಗುವಂತೆ 2024ರ ಜೂ.10ರವರೆಗೆ ಮೈಸೂರಿನಿಂದ ದಾವಣಗೆರೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಹಿನ್ನೆಲೆ: 6 ತಿಂಗಳು ರೌಡಿಶೀಟರ್ ಇರ್ಫಾನ್ ಗಡಿಪಾರು