ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ಕಾಮದೇವರು ಇಷ್ಟಾರ್ಥ ಸಿದ್ದಿ ದೈವವಾಗಿದ್ದಾನೆ. ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಕಲಿಯುಗದ ಕಾಮಧೇನು ಎಂಬ ಖ್ಯಾತಿಯೂ ಇದೆ. ರಾಜ್ಯದ ನಾನಾ ಭಾಗಗಳಲ್ಲಿ ಆಚರಿಸುವ ಹೋಳಿ ಆಚರಣೆ ಹಾಗೂ ನವಲಗುಂದ ರಾಮಲಿಂಗ ಕಾಮದೇವರಿಗೂ ಸಾಕಷ್ಟು ವ್ಯತ್ಯಾಸವಿದೆ, ಅಷ್ಟೇ ಮಹತ್ವವಿದೆ. ಇಲ್ಲಿ ವಿಶಿಷ್ಟ ಆಚರಣೆ ಮೂಲಕ ಕಾಮದೇವರನ್ನು ಪೂಜಿಸಲಾಗುತ್ತದೆ.
ಕೇವಲ ಬಣ್ಣ, ಓಕುಳಿ, ಹಲಗೆ ವಾದನಕ್ಕಷ್ಟೇ ಸೀಮಿತಗೊಳ್ಳದೇ ಭಯ ಭಕ್ತಿಗೆ ಒಲಿವ, ಬೇಡಿದ್ದನ್ನು ದಯಪಾಲಿಸುವ ಮಹಿಮಾನ್ವಿತ ದೈವ, ಸಂತಾನ ಹೀನರಿಗೆ ಸಂತಾನಭಾಗ್ಯ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ನೀಡುತ್ತಾನೆ. ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶಃ ಕಾಮಧೇನು ಕಲ್ಪವೃಕ್ಷ ಆಗಿದ್ದಾನೆ ಎನ್ನುತ್ತಾರೆ ಭಕ್ತರು.
ನವಲಗುಂದದಲ್ಲಿ ಹೋಳಿ ಹುಣ್ಣಿಮೆ ದಿನ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಏಕಾದಶಿ ರಾತ್ರಿ ಕಾಮಣ್ಣನ ಪ್ರತಿಷ್ಠಾಪನೆಯಾಗಲಿದ್ದು, ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಯ, ಭಕ್ತಿ, ಶ್ರದ್ಧೆಯಿಂದ ಆಗಮಿಸುತ್ತಾರೆ. ಹಿಂದೂ - ಮುಸ್ಲಿಂ ಬಾಂಧವರು ಸೇರಿಕೊಂಡು ಹಿಂದೂ ಪದ್ದತಿಯಂತೆ ಹಗಲಿರುಳೆನ್ನದೇ ಶ್ರಮವಹಿಸಿ ಪ್ರತಿಷ್ಠಾಪನೆಯಿಂದ ಹಿಡಿದು ಕಾಮ ದಹನದವರೆಗೂ ಸೇವೆ ಸಲ್ಲಿಸುತ್ತಾರೆ. ಪ್ರತಿಯೊಂದು ಓಣಿಯಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣಗಳಲ್ಲಿ ಇಷ್ಟಾರ್ಥ ಪೂರೈಸಿಕೊಳ್ಳಲು ಮಹಿಳೆಯರು ಉಪವಾಸ ವೃತ ಮಾಡಿ ಭಕ್ತಿಯಿಂದ ಪೂಜಿಸಿ ಹರಕೆ ತೀರಿಸುತ್ತಾರೆ.
ಐತಿಹಾಸಿಕ ಹಿನ್ನೆಲೆ: ಸವಣೂರು ನವಾಬರ ಆಡಳಿತಾವಧಿಯಲ್ಲಿ ಸಿದ್ದಿ ಪುರುಷನೊಬ್ಬ ವಿಶೇಷ ನಕ್ಷತ್ರ ದಿನದಂದು ವಿವಿಧ ಬಗೆಯ ಗಿಡಮೂಲಿಕೆ ಕಟ್ಟೆಗೆಗಳನ್ನು ಆಯ್ದು ತಂದು ಕಾಮಕಾಷ್ಠ ಮೂರ್ತಿ ರಚಿಸಲು ಸಿದ್ದನಾದನಂತೆ. ಇದೇ ವೇಳೆ, 99 ಗಿಡಮೂಲಿಕೆ ಕಟ್ಟೆಗೆಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಂಕಲ್ಪಕ್ಕೆ ಮುಂದಾದ, ಆದರೆ ಇನ್ನೊಂದು ಗಿಡಮೂಲಿಕೆ ಕಟ್ಟಿಗೆ ಸಿಕ್ಕಿದ್ದರೆ ಆತನ ಲೌಕಿಕ ಸಂಕಲ್ಪದ ಮೂರ್ತಿಗೆ ಜೀವಕಳೆ ಬರುತ್ತಿತ್ತು ಎಂಬ ಪ್ರತೀತಿ ಇದೆ.
ಅಷ್ಟರಲ್ಲಿ ದೈವ ಪುರುಷ ದೈವಾಧೀನನಾದರೆಂದು ಹೇಳುತ್ತಾರೆ. ಇನ್ನೊಂದು ಮೂಲಿಕೆ ಜೋಡಣೆಗಾಗಿ ಆತ ಕೊರೆದ ರಂಧ್ರ ಇಂದಿಗೂ ಕಾಣಬಹುದಾಗಿದೆ. ನೂರಾರು ವರ್ಷದ ಹಿಂದೆ ಸಿದ್ದಿ ಪುರುಷನ ಹಸ್ತದಿಂದ ತಯಾರಿಸಿದ ಮೂರ್ತಿಯನ್ನು ನವಲಗುಂದ ಪಟ್ಟಣಕ್ಕೆ ಯಾರು ಬರಮಾಡಿಕೊಂಡರೆಂಬುದು ಇಂದಿಗೂ ನಿಗೂಢವಾಗಿ ಉಳಿದಿದೆ.
ಇಷ್ಟಾರ್ಥ ಪೂರೈಸುವ ಆದಿದೇವ: ರಾಮಲಿಂಗೇಶ್ವರ ಕಾಮದೇವರು ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಕರುಣಾಳು ಆಗಿದ್ದಾನೆ. ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ರಾಮಲಿಂಗತೊಟ್ಟಿಲು, ಕಂಕಣ ಭಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ ವಸತಿ ಇಲ್ಲದವರು ಛತ್ರಿ ಛಾಮರ, ಉದ್ಯೋಗ ಬದುಕಿಗೆ ನೆಲೆ ಕಂಡುಕೊಳ್ಳಬೇಕಾದರೆ, ಬೆಳ್ಳಿ ಪಾದ ಅಥವಾ ಕುದುರೆ ಹರಕೆ ಹೊತ್ತು ಪೂಜಿಸಿದರೆ ಅವರ ಬೇಡಿಕೆ ಖಂಡಿತ ಈಡೇರುತ್ತದೆ ಎಂಬ ಪ್ರತೀತಿ ಇದೆ.
ಇಷ್ಠಾರ್ಥ ಸಿದ್ದಿ ಕಲ್ಪಿಸಿದ ನಂತರ ಇನ್ನೊಂದು ಬೆಳ್ಳಿ ಸಾಮಗ್ರಿ ಕಾಮಣ್ಣನಿಗೆ ಸಮರ್ಪಿಸಬೇಕು. ಹರಕೆ ತೀರಿಸುವ ಭಕ್ತರಿಗೆ ಸಂಘಟಕರೇ ಶುಲ್ಕ ವಿಧಿಸಿ ಪೂಜೆ ಪೂರೈಸುತ್ತಾರೆ. ರಾಜ್ಯ ಹೊರರಾಜ್ಯದಿಂದ ಆಗಮಿಸುವ ಅಪಾರ ಭಕ್ತರು, ರಾಮಲಿಗೇಶ್ವರ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ದೂರದವರೆಗೆ ಸರತಿ ಸಾಲಿನಲ್ಲಿ ನಿಂತು ಸುಡು ಬಿಸಿಲು ಎನ್ನದೇ ಭಕ್ತರು ದರ್ಶನ ಪಡೆಯುತ್ತಾರೆ.
ಹುಣ್ಣಿಮೆ ಮರುದಿನ ರಾಮಲಿಂಗ ಕಾಮಣ್ಣನ ಮೆರವಣಿಗೆ ನಡೆಸಿ ಬೆಳಗ್ಗೆ ಕಾಮದಹನ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ರಾಮಲಿಂಗ ಕಾಮಣ್ಣನ ಮೂಲ ಮೂರ್ತಿ ತೆಗೆದು ಅದರ ಬದಲಾಗಿ ಗಡಿಗೆ ಹಾಕಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ದಹನಗೊಳ್ಳುತ್ತಿರುವ ಕಾಮಣ್ಣನ ಗಡಿಗೆ ಮುಂದೆ ಬಿದ್ದರೆ ಮುಂಗಾರು ಉತ್ತಮ ಫಸಲು, ಹಿಂದೆ ವಾಲಿದರೆ ಹಿಂಗಾರು ಫಸಲು ಉತ್ತಮವಾಗಿ ಬರುತ್ತದೆ ಎಂಬ ವಾಡಿಕೆ ಇದೆ.
ಫೂಜಾರಿಗಳೇ ಇಲ್ಲದ ಸಿದ್ದಿಪುರುಷ: ಈ ಕಾಮದೇವರಿಗೆ ಪೂಜಾರಿಗಳೇ ಇಲ್ಲ ಪ್ರತಿಯೊಂದು ದೇವಸ್ಥಾನದಲ್ಲಿ ಒಬ್ಬ ಪೂಜಾರಿ ಅಥವಾ ಪುರೋಹಿತನಿರುತ್ತಾನೆ. ಆದರೆ, ರಾಮಲಿಂಗ ದೇವಸ್ಥಾನದಲ್ಲಿರುವ ಕಾಮಣ್ಣನಿಗೆ ಯಾವುದೇ ಪೂಜಾರಿ ಇಲ್ಲದಿರುವುದು ವಿಶೇಷ. ಹೋಳಿ ಹುಣ್ಣಿಮೆ ಪೂಜಾ ವಿಧಿ - ವಿಧಾನದಲ್ಲಿಯೂ ಕೂಡ ಮಂತ್ರ ಘೋಷಣೆ, ಅರ್ಚನೆಯೂ ಇಲ್ಲ. ಭಕ್ತರೇ ಪೂಜೆ ಸಲ್ಲಿಸಿ ಹರಕೆ ಹೊರುವ ಸಂಪ್ರದಾಯ ಇಲ್ಲಿದೆ.
ಇನ್ನೂ ಇಲ್ಲಿಗೆ ಆಗಮಿಸುವ ಭಕ್ತರ ಹರಕೆ ಈಡೇರಿದ ಉದಾಹರಣೆಗಳು ಹೆಚ್ಚು. ರಾಜ್ಯ ಅಲ್ಲದೇ ಅನ್ಯ ರಾಜ್ಯದ ಲಕ್ಷಾಂತರ ಭಕ್ಯರು ಆಗಮಿಸಿ ತಮ್ಮ ಹರಕೆಗಳನ್ನು ಹೊತ್ತು ಬೆಳ್ಳಿ ವಸ್ತು ತಗೆದುಕೊಂಡು ಹೋಗಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪೂಜೆ ಸಲ್ಲಿಸುತ್ತಾರೆ ಎನ್ನುತ್ತಾರೆ ಹುಚ್ಚಪ್ಪ ಬೋವಿ.
ಲಕ್ಷ್ಮಿ ಪೂಜಾರ ಅವರ ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರಲಿ ಎಂದು ಹರಕೆ ಹೊತ್ತಿದ್ದರಂತೆ, ಅದರಂತೆ ಅವರ ಹರಕೆ ಈಡೇರಿದೆ ಎನ್ನುತ್ತಾರೆ. ಇನ್ನೂ ಸೃಜನ ಎಂಬುವರು ತಮ್ಯ ಮಗಳಿಗೆ ಮೆಡಿಕಲ್ ಸೀಟಗಾಗಿ ಬೆಳ್ಳಿ ಹಸ್ತ ತಗೆದುಕೊಂಡು ಹೋಗಿ ಭಕ್ತಿಯಿಂದ ಪೂಜೆ ಮಾಡಿದ್ದರಿಂದ ಮೆಡಿಕಲ್ ಸೀಟು ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಇದನ್ನೂಓದಿ:ಬೆಣ್ಣೆ ನಗರಿಯಲ್ಲಿ ಜಂಗಿ ಕುಸ್ತಿ ಪಂದ್ಯಾಟ: ಪ್ರಶಸ್ತಿಗಾಗಿ ಪೈಲ್ವಾನ್ಗಳ ನಡುವೆ ಕಾದಾಟ - Jangi Kusti Tournament