ಬೆಂಗಳೂರು: ಲೋಕಸಭೆಯ ಮೊದಲ ಹಂತದ ಚುನಾವಣಾ ಪ್ರಚಾರ ಜೋರಾಗಿದ್ದು, ರಾಜ್ಯಕ್ಕೆ ರಾಷ್ಟ್ರ ನಾಯಕರು ಎಂಟ್ರಿ ಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಪ್ರಿಲ್ 17 ರಂದು ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಮಂಡ್ಯದಲ್ಲಿ ಮೊದಲ ಬಹಿರಂಗ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಪ್ರತಿಷ್ಠೆಯ ಕಣ ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಕೋಲಾರ ಕ್ಷೇತ್ರದಲ್ಲಿ ನಡೆಯಲಿರುವ ಮತ್ತೊಂದು ಪ್ರಚಾರ ಸಭೆ ಹಾಗೂ ರೋಡ್ ಶೋದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಬೆಂಗಳೂರಿನಲ್ಲೂ ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಿಎಂ ಮೋದಿ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಸಹ ಎರಡನೇ ಸುತ್ತಿನ ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್ 14 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಬೆಂಗಳೂರು ಉತ್ತರ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಸಂಜೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಮಂಗಳೂರಿನ ನಾರಾಯಣ ಗುರು ಸರ್ಕಲ್ ಬಳಿ ಮೋದಿ ಆಗಮಿಸಲಿದ್ದು, ನಾರಾಯಣ ಗುರು ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ನಡೆಯಲಿದೆ.
ಚಾಮರಾಜನಗರ, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತಬೇಟೆ: ಇಂದು (ಶುಕ್ರವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಮತ ಬೇಟೆ ನಡೆಸಲಿದ್ದಾರೆ. ಕೊಳ್ಳೇಗಾಲ, ನಂಜನಗೂಡು ಹಾಗೂ ಹೆಚ್. ಡಿ. ಕೋಟೆ ತಾಲೂಕುಗಳಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಮೈಸೂರಿನ ಕೃಷ್ಣರಾಜ, ಹುಣಸೂರು ಹಾಗೂ ಪರಿಯಾಪಟ್ಟಣ ಮತ್ತಿತರ ಕಡೆ ಪಕ್ಷದ ಅಭ್ಯರ್ಥಿಗಳ ಪರ ಸಿಎಂ ಮತಯಾಚನೆ ನಡೆಸುವರು.
ಇದನ್ನೂ ಓದಿ: ಕುಟುಂಬ ಸದಸ್ಯರನ್ನು ಬಿಜೆಪಿಯಿಂದ ನಿಲ್ಲಿಸಿ, ಜೆಡಿಎಸ್ ಪಕ್ಷ ಹೇಗೆ ಕಟ್ಟುತ್ತಾರೆ: ಡಿ.ಕೆ.ಶಿವಕುಮಾರ್ ಲೇವಡಿ - DK Shivakumar