ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 16 ರಿಂದ 17ಸ್ಥಾನ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದ ಕಾಂಗ್ರೆಸ್ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ನಾಯಕರು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ. ಈ ಕುರಿತು ಆತ್ಮಾವಲೋಕನ ನಡೆಸಿ, ಈಗಿನಿಂದಲೇ ಪಕ್ಷ ಸಂಘಟನೆ ಮಾಡಿ ಬಲಗೊಳಿಸುವ ಮೂಲಕ ಮುಂದಿನ ಗೆಲುವಿಗೆ ಸಿದ್ಧತೆ ನಡೆಸಬೇಕು ಎಂದು ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ಪರಿಚಯಿಸಿಕೊಂಡು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಪರಾಜಿತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ನಮ್ಮ ನಿರೀಕ್ಷೆಗಿಂತ ಕಡಿಮೆ ಫಲಿತಾಂಶ ಬಂದಿದೆ. ಆದರೂ, ನಮ್ಮ ವೋಟ್ ಶೇರ್ ಹೆಚ್ಚಿದೆ. ಜೊತೆಗೆ ಮೋದಿ ಅವರ ಗೆಲುವಿನ ಓಟಕ್ಕೆ ತಡೆ ಹಾಕಿದ್ದೇವೆ. ಸಂವಿಧಾನದ ರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ. ಹಾಗಾಗಿ ಸೋಲಿನಿಂದ ಧೃತಿಗೆಡಬೇಡಿ. ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದು ಹುರಿದುಂಬಿಸಿದರು.
ಸೋಲಿನ ಬಗ್ಗೆ ವರದಿ ಕೊಡಿ: ಇದರ ಹೊರತಾಗಿ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ರಾಹುಲ್ ಗಾಂಧಿ, ಸಚಿವರು ಉಸ್ತುವಾರಿ ಹೊತ್ತ ಕ್ಷೇತ್ರಗಳಲ್ಲಿ ಕಡಿಮೆ ಮತ ಗಳಿಸಿದ್ದು, ಹಾಗೂ ಸೋತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವು ಹೇಳಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇತ್ತು. ಆದರೂ ಗೆಲ್ಲಿಸುವಲ್ಲಿ ವಿಫಲರಾಗಿದ್ದೀರಿ. ನಿಮ್ಮ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ತಿಳಿಸಿ ಎಂದ ಅವರು ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಿ ಎಂದರು. ಇದೇ ವೇಳೆ, ರಾಜ್ಯದಲ್ಲಿ ಪಂಚ ಗ್ಯಾರಂಟಿ ನೀಡಿದರೂ ಸೋಲಿಗೆ ಕಾರಣವೇನು. ಎಲ್ಲಿ ತಪ್ಪಾಗಿದೆ ಎಂಬ ಕುರಿತು ಸೋಲಿನ ಬಗ್ಗೆ ವಿಧಾನ ಸಭಾವಾರು ವರದಿ ಕೊಡಿ ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿಗೆ ಜಾಮೀನು ನೀಡಿದ ಬೆಂಗಳೂರು ಕೋರ್ಟ್