ಶಿವಮೊಗ್ಗ: ಸೋಗಾನೆಯಲ್ಲಿನ ಕೇಂದ್ರ ಕಾರಾಗೃಹದ ಸಜಾ ಬಂಧಿಯೊಬ್ಬರು ಕಾರಾಗೃಹದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಸಜಾ ಬಂಧಿಯಾಗಿದ್ದ ರಾಜಪ್ಪ(38) ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ರಾಜಪ್ಪನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿದಿನ ಬೆಳಗ್ಗೆ 7-30 ರಿಂದ 8 ಗಂಟೆಗೆ ಜೈಲಿನ ಸಜಾ ಬಂಧಿಗಳಿಗೆ ಗಾರ್ಡನ್ನಲ್ಲಿ ಕೆಲಸ ಮಾಡಲು ಬಿಡಲಾಗುತ್ತದೆ. ಈ ಗಾರ್ಡನ್ ಕೆಲಸ ಸಂಜೆ 5 ಗಂಟೆವರೆಗೆ ನಡೆಯುತ್ತದೆ. ಗಿಡಕ್ಕೆ ಔಷಧಿ ಹೊಡೆಯಲು ಕೊಟ್ಟ ರಾಸಾಯನಿಕ ಸೇವಿಸಿ ರಾಜಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ರಾಜಪ್ಪನಿಗೆ 2002ರಲ್ಲಿ ಕೊಲೆ ಆರೋಪದಡಿ ರಾಜ್ಯ ಉಚ್ಛ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಇವರು ಶಿವಮೊಗ್ಗ ಜೈಲಿಗೆ ಬಂದು ಒಂದು ವರ್ಷ ಕಳೆದಿದೆ.
ಕಾರಾಗೃಹದಿಂದ ಸ್ಪಷ್ಟನೆ : ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಎಂದಿನಂತೆ ಹೊರತೋಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಜಾ ಬಂಧಿ ರಾಜಪ್ಪ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಸಮಯ ಪ್ರಜ್ಞೆ ತೋರಿದ ಸಿಬ್ಬಂದಿ ಕೈದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಜೈಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.