ಹುಬ್ಬಳ್ಳಿ: ಮಾರ್ಚ್ 16ರಿಂದ ಇಲ್ಲಿಯವರೆಗೆ ಧಾರವಾಡ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ವೇಳೆ ನಗದು ಸೇರಿದಂತೆ 1.23 ಕೋಟಿ ರೂ ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.
ಪಾಲಿಕೆ ಆವರಣದ ಸಭಾಭವನದಲ್ಲಿ ಇಂದು ಪತ್ರಕರ್ತರಿಗೆ ಮಾಧ್ಯಮ ಕಾರ್ಯಾಗಾರ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
38.50 ಲಕ್ಷ ರೂ ಮೌಲ್ಯದ ಚಿನ್ನ, 18.71 ಲಕ್ಷ ರೂ. ನಗದು, 8 ಲಕ್ಷ ಮೌಲ್ಯದ ಡ್ರಗ್ಸ್, 28.29 ಲಕ್ಷ ಮೌಲ್ಯದ ಮದ್ಯ, 2,000 ಸೀರೆ, 1,342 ಜೀನ್ಸ್ ಫ್ಯಾಂಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ 48, ಎಸ್ಎಸ್ಟಿ 10 ಹಾಗು ವಿಎಸ್ಟಿ ಮೂಲಕ 1 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಹಣ ಕೊಂಡೊಯ್ಯುವ ವೇಳೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದಾಖಲೆಗಳಿಲ್ಲದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ದಾಖಲೆ ಸಲ್ಲಿಸಿದ ಬಳಿಕ ಹಣ ವಾಪಸ್ ನೀಡಲಾಗುವುದು. ಈ ರೀತಿ 4.50 ಲಕ್ಷ ರೂ. ಹಣವನ್ನು ಈಗಾಗಲೇ ಮರಳಿಸಿದ್ದೇವೆ ಎಂದರು.
ಮಾಧ್ಯಮಗಳ ಪ್ರತಿನಿಧಿಗಳ ಜತೆಗೆ ಸಂವಾದ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಜಾಹೀರಾತು, ಸುದ್ಧಿ ಹಾಗೂ ಪ್ರಾಯೋಜಿತ ಲೇಖನಗಳ ಬಗ್ಗೆ ಜಿಲ್ಲಾಧಿಕಾರಿ ಸಂವಾದ ನಡೆಸಿದರು.
ಚುನಾವಣೆಯಲ್ಲಿ ಮಾಧ್ಯಮಗಳು ಅನುಸರಿಸಬೇಕಾದ ನಿಯಮಗಳು ಹಾಗೂ ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಹೆಸ್ಕಾಂ ಜಿಎಂ ಸಿದ್ಧು ಹುಳ್ಳೊಳ್ಳಿ ಮಾಹಿತಿ ನೀಡಿದರು. ಪಿಪಿಟಿ ಪ್ರೆಸೆಂಟೇಶನ್ ಮೂಲಕ ಮಾಹಿತಿ ನೀಡಿದ್ದು, ಬಳಿಕ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮಾಧ್ಯಮಗಳು ಅನುಸರಿಸಬೇಕಾದ ಕ್ರಮಗಳು ಹಾಗೂ ಎಲೆಕ್ಟ್ರಾನಿಕ್, ಪ್ರಿಂಟ್ ಹಾಗೂ ಸೋಶಿಯಲ್ ಮೀಡಿಯಾಗಳ ಮೇಲಿರುವ ನಿರ್ಬಂಧಗಳ ಬಗ್ಗೆ ತಿಳಿಸಲಾಯಿತು.
ಇದನ್ನೂ ಓದಿ: ಚಾಮರಾಜನಗರ ಡಿಸಿಗೆ ಬಂದ ಫೋನ್ ಕರೆ; 98 ಕೋಟಿ ಮೌಲ್ಯದ ಬಿಯರ್ ವಶ, ಫ್ಯಾಕ್ಟರಿ ಸೀಜ್ - FACTORY SEIZE