ಬೆಳಗಾವಿ: ನಿಮಗೆ ಲೆಕ್ಕ ಕೊಡುವ ಎಂಪಿ ಬೇಕಾ?, ಇಲ್ಲವೇ ವೈಟ್ ಶರ್ಟ್ ಹಾಕಿಕೊಂಡು ಲೆಕ್ಕ ಮುಚ್ಚಿಡುವ ಎಂಪಿ ಬೇಕಾ? ಎಂಬುದನ್ನು ನಿರ್ಧರಿಸಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪ್ರೇಮ್ ಚೌಗುಲೆ ಅವರು ಮತದಾರರಲ್ಲಿ ಮನವಿ ಮಾಡಿದರು.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಆರಿಸಿ ತಂದರೆ ನಾನು ಕಾರ್ಮಿಕನಾಗುತ್ತೇನೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕೆಲಸ ಮಾಡುತ್ತೇನೆ. ಪ್ರಜಾಕೀಯದಿಂದ ಆಯ್ಕೆಯಾಗಿ ಬೇರೆ ಪಕ್ಷಕ್ಕೆ ಹೋದರೆ ಆಗಲೂ ನನ್ನ ರಾಜೀನಾಮೆ ಪಡೆಯುವ ಹಕ್ಕು ಜನರಿಗಿದೆ ಎಂದರು.
ಒಂದು ವೇಳೆ ನಾನು ಅಧಿಕಾರದಿಂದ ಕೆಳಗಿಳಿಯದೇ ಇದ್ದರೆ ಪಕ್ಷದ ಮುಖಂಡರು, ಅಧ್ಯಕ್ಷರು ನಮ್ಮ ಮನೆಗೆ ಬಂದು ನನ್ನ ಕೆಳಗಿಳಿಸುತ್ತಾರೆ. ಈ ರೀತಿ ನೀವು ಯಾವುದೇ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ. ಯಾರಿಗೂ ದುಡ್ಡು ಕೊಡುವಂತಿಲ್ಲ, ಸುಳ್ಳು ಭರವಸೆ ನೀಡುವಂತಿಲ್ಲ. ಐದು ವರ್ಷಕ್ಕೆ ಒಬ್ಬ ಎಂಪಿಗೆ ಬರುವ 25 ಕೋಟಿ ರೂ ಅನುದಾನದಲ್ಲಿ ಬೇಕಾದಷ್ಟು ಅಭಿವೃದ್ಧಿ ಮಾಡಬಹುದು ಎಂದು ತಿಳಿಸಿದರು.
ಎಲ್ಲರೂ ಪ್ರಜಾಕೀಯ ಇಷ್ಟಪಡುತ್ತಾರೆ. ಆದರೆ, ನಮಗಿನ್ನೂ ಸಮಯ ಬೇಕು ಅಂತಾ ಜನ ಹೇಳುತ್ತಾರೆ. ಇನ್ನೂ 20 ವರ್ಷ ಸಮಯ ತೆಗೆದುಕೊಳ್ಳಿ. ಆಗ ಗೆಲ್ಲೋದು ಪ್ರಜಾಕೀಯ ಪಕ್ಷವೇ. ಯಾಕೆಂದರೆ ಇದು ಸತ್ಯ. ನಮ್ಮದು ಜನರ ಮತ್ತು ಜನರ ಮಾತು ಕೇಳುವ ಪಕ್ಷ. ಮುಂದೆ ನನಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಆದರೆ ದುಡ್ಡು ಹಂಚದೇ, ಜಾತಿ, ಮತ ಮಾಡದೇ ಚುನಾವಣೆ ಎದುರಿಸುವ ಸಂದರ್ಭ ಬಂದೇ ಬರುತ್ತದೆ. ಹೊರ ದೇಶಗಳಲ್ಲಿ ಅಭ್ಯರ್ಥಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಜನರ ಬಳಿ ಹೋಗುತ್ತಾರೆ. ನಾಮಪತ್ರ ಸಲ್ಲಿಸಿ ಮನೆಯಲ್ಲೇ ಇರುತ್ತಾರೆ. ಇಂಥ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗಲು ಯಾಕೆ ಸಾಧ್ಯವಿಲ್ಲ ಎಂದು ಪ್ರೇಮ್ ಚೌಗುಲೆ ಪ್ರಶ್ನಿಸಿದರು.