ದಾವಣಗೆರೆ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧನದಲ್ಲಿರುವ ಆರೋಪಿಗಳ ಮೇಲೆ ನಿಗಾ ವಹಿಸುವ ಸಲುವಾಗಿ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಜಿಲ್ಲಾ ಎಸ್ಪಿಯಾದ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ, ಎಂ.ಸಂತೋಷ್ ಮತ್ತು ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಹಾಗೂ ಎಂಟು ಜನ ಪೊಲೀಸ್ ನಿರೀಕ್ಷಕರುಗಳು, ಒಂಬತ್ತು ಪಿಎಸ್ಐಗಳು, 50 ಜನ ಪೊಲೀಸ್ ಸಿಬ್ಬಂದಿ ತಂಡ ದಿಢೀರ್ ಕಾರಾಗೃಹದ ಮೇಲೆ ದಾಳಿ ಮಾಡಿದೆ.
ಅನಿರೀಕ್ಷಿತ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಕಾರಾಗೃಹವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ, ಕಾರಾಗೃಹದಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ. ದಾಳಿ ನಡೆಸಿದ ಬಳಿಕ ಕಾರಾಗೃಹದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಪಿಗಳ ವಿವರ ಪಡೆದು ಅವರುಗಳ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಕೈದಿಗಳ ನಡುವೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಮುಂಜಾಗೃತೆ ಕ್ರಮ ವಹಿಸುವಂತೆ ತಿಳಿಸಲಾಗಿದೆ.