ಹಾವೇರಿ: ಜನವರಿ 8ರಂದು ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದ್ದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪರೇಡ್ ಅನ್ನು ಹಾವೇರಿ ಪೊಲೀಸರು ಗುರುವಾರ ನಡೆಸಿದರು.
ಹಾವೇರಿ ಸಮೀಪದ ಕೆರಿಮತ್ತಿಹಳ್ಳಿ ಬಳಿ ಇರುವ ಜಿಲ್ಲಾ ಕಾರಾಗೃಹದಲ್ಲಿ ಸಂತ್ರಸ್ತೆ ಎದುರು 19 ಆರೋಪಿಗಳ ಪರೇಡ್ ನಡೆದಿದೆ. ಪ್ರಕರಣದ ಆರೋಪಿಗಳು ಇದುವರೆಗೆ ಜಿಲ್ಲಾ ಕಾರಾಗೃಹದಲ್ಲಿಯೇ ಇದ್ದರು. ಕಾರಾಗೃಹಕ್ಕೆ ತೆರಳಿ ಸಂತ್ರಸ್ತೆಯು ಆರೋಪಿಗಳ ಗುರುತು ಪತ್ತೆ ಮಾಡುವ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ. ಹಾನಗಲ್ ತಹಶೀಲ್ದಾರ್ ರೇಣುಕಮ್ಮ ಉಪಸ್ಥಿತರಿದ್ದರು.
ಪ್ರಕರಣವೇನು?: ವಿವಾಹಿತ ಮಹಿಳೆ ಹಾನಗಲ್ ಸಮೀಪದ ಲಾಡ್ಜ್ವೊಂದರಲ್ಲಿ ಪುರುಷನ ಜೊತೆ ಮಾತನಾಡುತ್ತಿದ್ದಳು. ಈ ವಿಷಯ ತಿಳಿದ ಲಾಡ್ಜ್ ಸಿಬ್ಬಂದಿಯೋರ್ವ ಯುವಕರಿಗೆ ಸುದ್ದಿ ಮುಟ್ಟಿಸಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಲಾಡ್ಜ್ಗೆ ಬಂದ ಆರೋಪಿಗಳು ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ, ನಂತರ ಕಾಡಿನೊಳಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಜ.10ರಂದು ಹಲ್ಲೆ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆ ನಂತರ ನ್ಯಾಯಾಧೀಶರ ಮುಂದೆ ಸಾಮೂಹಿಕ ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದರು. ಸಂತ್ರಸ್ತೆಯ ದೂರಿನ ಮೇರೆಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತನಿಖಾ ತಂಡ 19 ಆರೋಪಿಗಳನ್ನು ಬಂಧಿಸಿತ್ತು.
ಇದನ್ನೂ ಓದಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಬಂಧನ: ಎಸ್ಪಿ