ಶಿರಸಿ (ಉತ್ತರ ಕನ್ನಡ): ದಿನದಿಂದ ದಿನಕ್ಕೆ ಮಂಗನ ಕಾಯಿಲೆ ತೀವ್ರತೆ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೋಗಕ್ಕೆ 4ನೇ ಸಾವು ಸಂಭವಿಸಿದೆ. ಈವರೆಗೆ ಸಿದ್ದಾಪುರ ತಾಲೂಕು ಒಂದರಲ್ಲೇ ಮೂರು ಜನರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇದರಿಂದ ಜನರಲ್ಲಿ ಆತಂಕದ ಮನೆ ಮೂಡಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಾಪುರದ ಕಲ್ಲೂರಿನ 65 ವರ್ಷದ ವೃದ್ಧ ಚಿಕಿತ್ಸೆ ಫಲಿಸದೇ ಇಂದು (ಸೋಮವಾರ) ಸಾವನ್ನಪ್ಪಿದ್ದಾರೆ.
ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಹರಡುವ ಪ್ರಮಾಣ ಏರುತ್ತಿದೆ. ಇದಲ್ಲದೇ ಶಿರಸಿಯಲ್ಲೂ ಒಂದು ದಿನದ ಹಿಂದಷ್ಟೇ ವೃದ್ಧರೊಬ್ಬರು ಮೃತಪಟ್ಟಿದ್ದರು. ಇದರಿಂದ ಕ್ರಮೇಣ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡಿದೆ. ಲಸಿಕೆ ಇಲ್ಲದಿರೋದೇ ಪ್ರಮುಖ ಕಾರಣವಾಗಿದ್ದು, ಪ್ರಕರಣಗಳ ಸಂಖ್ಯೆ ಏರುತ್ತಿದ್ರೂ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಹರಡುತ್ತಿದ್ದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿಲ್ಲವೆಂದು ಜನರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆಯೂ ಮಂಗನ ಕಾಯಿಲೆಯಿಂದ ವೃದ್ಧ ಸಾವು: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸೋಂಕು ಪ್ರಕರಣಗಳು ಹೆಚ್ಚಳ ಆಗುತ್ತಿದೆ. ಭಾನುವಾರ (ಫೆ.3 ರಂದು) ಶಿರಸಿ ತಾಲೂಕಿನ ಹತ್ತರಗಿ ನವಿಲಗಾರದಲ್ಲಿ ಮಂಗನ ಕಾಯಿಲೆಯಿಂದ ವೃದ್ಧನೋರ್ವ ಸಾವಿಗೀಡಾಗಿದ್ದರು. ಶಿರಸಿ ತಾಲೂಕಿನ ಹತ್ತರಗಿ ಸಮೀಪದ ನವಿಲಗಾರ ಗ್ರಾಮದ ರಾಮಚಂದ್ರ ಗೌಡ (68) ಮೃತಪಟ್ಟಿರುವ ವೃದ್ಧ. ಕೆಲವು ದಿನಗಳಿಂದ ಇವರು ಉಡುಪಿಯ ಮಣಿಪಾಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿನ್ನೆ ಸಾವನ್ನಪ್ಪಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 47 ಕೆಎಫ್ಡಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಸಿದ್ದಾಪುರದಲ್ಲಿ ಅತಿ ಹೆಚ್ಚು ಮಂಗನ ಕಾಯಿಲೆ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಶಿರಸಿಯಲ್ಲಿ ಇದು ಮೊದಲ ಬಾರಿಗೆ ಪ್ರಕರಣ ಪತ್ತೆಯಾಗಿತ್ತು. ಸರಿಯಾದ ಔಷಧಿ ಇಲ್ಲದ ಪರಿಣಾಮ ಕಾಯಿಲೆ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ವೈದ್ಯರ ಹಾಗೂ ಸಹಾಯಕರ ತಂಡ ಸ್ಥಳಗಳಿಗೆ ಭೇಟಿ ನೀಡಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: ಮೈಶುಗರ್ ಕಾರ್ಖಾನೆಯನ್ನು ಯಾರೂ ಟಚ್ ಮಾಡಬಾರದು: ಸಂಸದೆ ಸುಮಲತಾ