ಚಾಮರಾಜನಗರ: ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲದ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಸ್ ನಿಲ್ದಾಣ ಬದಿಯಲ್ಲಿ ಶನಿವಾರ ಸಂಜೆ ನಡೆದಿದೆ. ಸುಮಾರು 40 ರಿಂದ 45 ವರ್ಷದ ವಯಸ್ಸಿನ ವ್ಯಕ್ತಿಯ ಶವ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ ನೋಂದಣಿಯ ಸ್ವಿಫ್ಟ್ ಕಾರಿನ ಹಿಂಬದಿ ಸೀಟ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಮಧ್ಯಾಹ್ನದಿಂದಲೂ ಈ ಕಾರು ಒಂದೇ ಜಾಗದಲ್ಲಿ ನಿಂತಿತ್ತು ಎನ್ನಲಾಗಿದೆ. ಕಾರಿನ ಬಾಗಿಲಿನಿಂದ ರಕ್ತ ಕೆಳಗಡೆ ಸುರಿದು, ವಾಸನೆ ಬಂದಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಕಾರಿನ ಬಾಗಿಲು ತೆರೆದು ಪರಿಶೀಲಿಸಿದಾಗ ಬನಿಯನ್ ಹಾಗೂ ಚಡ್ಡಿ ಧರಿಸಿದ್ದ ವ್ಯಕ್ತಿ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
''ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವ ಕೊಳೆತ ಸ್ಥಿತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈಗಲೇ ಆತ್ಮಹತ್ಯೆ, ಇಲ್ಲವೇ ಕೊಲೆ ಎಂಬುದನ್ನು ಹೇಳಲಾಗಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಎಲ್ಲವೂ ತಿಳಿಯಲಿದೆ. ಗುರುತು ಪತ್ತೆಗೆ ಮುಂದಾಗಿದ್ದೇವೆ'' ಎಂದು ಕೊಳ್ಳೇಗಾಲ ಸಿಪಿಐ ಶಿವಮಾದಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ; ದೇಹ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟ ಆರೋಪಿ - Murder In Bengaluru