ಬೆಂಗಳೂರು: ವೀಲ್ಹಿಂಗ್ ಮಾಡಿ ಸಿಕ್ಕಿಬಿದ್ದ ಅಪ್ರಾಪ್ತನಿಗೆ ವಾಹನ ಕೊಟ್ಟ ವ್ಯಕ್ತಿಯನ್ನು 'ದೋಷಿ' ಎಂದು ಪರಿಗಣಿಸಿದ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯವು 25,200 ರೂ. ದಂಡ ವಿಧಿಸಿ ಆದೇಶಿಸಿದೆ. ವಾಹನ ಮಾಲೀಕ ಸೆಲ್ವಮ್ (59) ಎಂಬವರು ಪ್ರಕರಣದಲ್ಲಿ ದೋಷಿಯಾಗಿದ್ದು, ಕೋರ್ಟ್ ಆದೇಶದಂತೆ ದಂಡ ಕಟ್ಟಬೇಕಿದೆ.
ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ 2023ರ ಜನವರಿ 9ರಂದು ಸಂಜೆ 4.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪ್ರಾಪ್ತರು ವೀಲ್ಹಿಂಗ್ ಮಾಡುತ್ತಿದ್ದರು. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ವಾಹನ ವಶಕ್ಕೆೆ ಪಡೆದು ವರದಿ ನೀಡಿದ್ದರು. ಇದರಂತೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೀಲ್ಹಿಂಗ್ ಮಾಡುತ್ತಿದ್ದಾತ ಕಾನೂನು ಸಂಘರ್ಷಕ್ಕೆೆ ಒಳಪಟ್ಟ ಬಾಲಕನಾಗಿದ್ದರಿಂದ ಆತನ ವಿರುದ್ಧ ಬಾಲ ನ್ಯಾಯಮಂಡಳಿಗೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಈ ಬಾಲಕ 'ದೋಷಿ' ಎಂದು ಸಾಬೀತಾಗಿತ್ತು. ಹೀಗಾಗಿ ಬಾಲಕನಿಗೆ 2 ಸಾವಿರ ರೂ. ದಂಡ ವಿಧಿಸಿ 2023 ಜೂನ್ 5ರಂದು ಆದೇಶಿಸಿತ್ತು. ಅಪಾಪ್ತ ವಯಸ್ಕನಿಗೆ ವಾಹನ ಚಾಲನೆ ಮಾಡಲು ನೀಡಿದ ಸೆಲ್ವಮ್ ವಿರುದ್ಧ ಸಂಚಾರ ನ್ಯಾಯಾಲಯಕ್ಕೆೆ ಸಂಚಾರ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಿದೆ.
ಇದನ್ನೂ ಓದಿ: ಅಧಿಕಾರಿಗಳು ಜನಸಾಮಾನ್ಯರ ಸೇವೆ ಸಲ್ಲಿಸಬೇಕೇ ವಿನಃ ಪ್ರಭಾವಿಗಳ ಪರ ಅಲ್ಲ: ಹೈಕೋರ್ಟ್