ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸುಗಮ ಸಂಚಾರಕ್ಕಾಗಿ ಪಥ ಶಿಸ್ತು (line Discipline) ಪಾಲಿಸುವಂತೆ ಕಳೆದ ಮಂಗಳವಾರದಿಂದ ಅಭಿಯಾನ ಕೈಗೊಂಡಿದ್ದ ನಗರ ಸಂಚಾರ ಪೊಲೀಸರು, ಕಳೆದ ನಾಲ್ಕು ದಿನಗಳಲ್ಲಿ 100ಕ್ಕೂ ಹೆಚ್ಚು ಲಾರಿ, ಟ್ರಕ್ ಸೇರಿ ಭಾರಿ ಗಾತ್ರದ ವಾಹನಗಳ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.
ಭಾರೀ ಗಾತ್ರದ ವಾಹನಗಳನ್ನ ರಸ್ತೆ ಎಡಭಾಗದಲ್ಲಿ ಚಲಿಸಬೇಕು. ವೇಗವಾಗಿ ಚಲಿಸುವ ವಾಹನಗಳು ರಸ್ತೆ ಮಧ್ಯ ಹಾಗೂ ರಸ್ತೆ ಬಲಭಾಗದಲ್ಲಿ ಮಾತ್ರ ಓವರ್ ಟೇಕಿಂಗ್ ಮಾಡಬೇಕು ಎಂದು ಸಂಚಾರ ಪೊಲೀಸರು ನಿರ್ದೇಶಿಸಿದ್ದರು. ಇದನ್ನ ಅರಿಯದ ಚಾಲಕರು ನಿಯಮ ಉಲ್ಲಂಘಿಸಿದ್ದಾರೆ. ಎಡಭಾಗದಲ್ಲಿ ಚಲಿಸುವ ಬದಲು ಬಲಭಾಗದಲ್ಲಿ ಸಂಚರಿಸಿದ್ದಾರೆ. ಇಂತಹ 100ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.
ಪಥ ಶಿಸ್ತು ಪಾಲಿಸದ ಹಿನ್ನೆಲೆ ನಿನ್ನೆವರೆಗೂ 75 ವಾಹನಗಳ ಮೇಲೆ ಪ್ರಕರಣ ದಾಖಲಾಗಿತ್ತು. ಇಂದು ಸಂಜೆವರೆಗೂ 30ಕ್ಕೂ ಹೆಚ್ಚು ಚಾಲಕರ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಬಹುತೇಕ ಚಾಲಕರಿಗೆ ರಸ್ತೆಪಥ ನಿಯಮದ ಬಗ್ಗೆ ಅರಿವಿಲ್ಲ. ಈ ಬಗ್ಗೆ ದಂಡ ಕಟ್ಟಿಸಿಕೊಂಡು ಸಂಚಾರ ನಿಯಮದ ಬಗ್ಗೆ ತಿಳಿವಳಿಕೆ ಮೂಡಿಸಲಾಗಿದೆ. ಏರ್ಪೋರ್ಟ್ ರಸ್ತೆ ಬಳಸುವ ವಾಹನ ಚಾಲಕರಿಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಹೆಬ್ಬಾಳ ಬಳಿ ನಾಮಫಲಕ ಹಾಕಲಾಗಿದೆ. ಭಾರೀ ಹಾಗೂ ಮಧ್ಯಮ ಗಾತ್ರದ ವಾಹನಗಳು ರಸ್ತೆ ಎಡಭಾಗದಲ್ಲಿ ವೇಗದ ಮಿತಿ ಗಂಟೆಗೆ ಕಿ.ಮೀ 40 ನಿಗದಿಪಡಿಸಲಾಗಿದೆ. ಮಧ್ಯ ರಸ್ತೆಯಲ್ಲಿ ವೇಗವಾಗಿ ಹೋಗುವ ವಾಹನಗಳಿಗೆ 60 ಹಾಗೂ ಓವರ್ ಟೇಕ್ ಮಾಡುವ ವಾಹನಗಳಿಗೆ ಗರಿಷ್ಠ ವೇಗದ ಮಿತಿ 80ಕ್ಕೆ ನಿಗದಿಪಡಿಸಿರುವ ಬಗ್ಗೆ ನಾಮಫಲಕದಲ್ಲಿ ತಿಳಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.