ಶಿವಮೊಗ್ಗ: ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಕೊಂಡೊಯ್ಯುವ ಯೋಜನೆಗೆ ಶಿವಮೊಗ್ಗ ಜಿಲ್ಲೆಯ ಸಾಹಿತಿಗಳು, ಹೋರಾಟಗಾರರು, ಸ್ವಾಮೀಜಿಗಳು ಹಾಗೂ ನಾಗರೀಕರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಇದೇ ಯೋಜನೆ ಜಾರಿಗೆ ಮುಂದಾಗಿದ್ದ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ನಡೆ ಖಂಡಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಬೆದರಿದ ಅಂದಿನ ಸರ್ಕಾರ ಈ ಯೋಜನೆಯನ್ನು ಅಲ್ಲೇ ಕೈ ಬಿಟ್ಟಿತ್ತು. ನಂತರ ಬಂದ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಈ ಯೋಜನೆಯನ್ನು ರದ್ದು ಮಾಡದೆ ಹಾಗೆಯೇ ಉಳಿಸಿಕೊಂಡಿತ್ತು. ಈಗ ಮತ್ತೆ ಸಿದ್ದರಾಮಯ್ಯನವರ ಸರ್ಕಾರ ಅದೇ ಯೋಜನೆ ಜಾರಿಗೆ ಮುಂದಾಗುತ್ತಿದೆ. ಯೋಜನೆಯ ಕುರಿತು ಡಿಪಿಆರ್ನ್ನು ತಯಾರು ಮಾಡಿದೆ ಎನ್ನಲಾಗುತ್ತಿದೆ.
ನಾಡಿಗೆ ಬೆಳಕು ನೀಡಿದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಅವೈಜ್ಞಾನಿಕ ಹಾಗೂ ಪರಿಸರಕ್ಕೆ ಮಾರಕವಾದ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ ನಾ.ಡಿಸೋಜಾ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ನಾಗೇಶ್ ಹೆಗಡೆ, ಹೆಗ್ಗೋಡಿನ ಪ್ರಸಿದ್ಧ ರಂಗಕರ್ಮಿ ಚಿದಂಬರ ರಾವ್ ಜಂಬೆ ಸೇರಿದಂತೆ ನಾಡಿನ ಸಾಹಿತಿಗಳು, ಚಿಂತಕರು, ಪರಿಸರ ಹೋರಾಟಗಾರರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಈ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಬಹಿರಂಗ ಪತ್ರದಲ್ಲಿನಿದೆ?: "ಯಾವುದೇ ಮಿತಿ ಇಲ್ಲದೆ, ವೈಜ್ಞಾನಿಕ ಯೋಜನೆ ಇಲ್ಲದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆ ನೀಗಿಸಲು ರಾಜ್ಯ ಸರ್ಕಾರ ಈಗ ಮತ್ತೊಮ್ಮೆ ಶರಾವತಿ ನದಿಯ ಮೇಲೆ ಕಣ್ಣು ಹಾಕಿದೆ. ಬೆಂಗಳೂರಿನಿಂದ 380 ಕಿ.ಮೀ. ದೂರದಲ್ಲಿರುವ, ಜಗತ್ತಿನ ಅತ್ಯಪರೂಪದ ಅತಿ ಸೂಕ್ಷ್ಮ ಜೀವ ವೈವಿಧ್ಯದ ಕಣಿವೆಯಾದ ಶರಾವತಿ ಕೊಳ್ಳದಿಂದ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮತ್ತೆ ಮುಂದಾಗಿದೆ. ಆದರೆ ಈ ಯೋಜನೆ ಕೇವಲ ಶರಾವತಿ ಕೊಳ್ಳವಷ್ಟೇ ಅಲ್ಲದೆ, ಪಶ್ಚಿಮಘಟ್ಟದ ಪರಿಸರ ಸಮತೋಲನದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಲಿದೆ ಎಂದು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೇರಿದಂತೆ ಹಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, 2019ರಲ್ಲಿ ಕೂಡ ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿತ್ತು. ಆಗ ಶರಾವತಿ ಕೊಳ್ಳದ ಶಿವಮೊಗ್ಗ ಉತ್ತರಕನ್ನಡ ಜಿಲ್ಲೆಗಳ ಜನ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸಿದ್ದರು. ತಿಂಗಳುಗಟ್ಟಲೆ ನಡೆದ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ, ಯೋಜನೆ ಕಾರ್ಯಸಾಧುವಲ್ಲ, ಹಾಗಾಗಿ ಆ ಯೋಚನೆ ಕೈಬಿಡಲಾಗಿದೆ ಎಂದು ಘೋಷಿಸಿತ್ತು".
"ಐದು ವರ್ಷಗಳಲ್ಲೇ ಸರ್ಕಾರ ಮತ್ತೊಮ್ಮೆ ಶರಾವತಿ ನದಿ ನೀರಿನ ಮೇಲೆ ಕಣ್ಣು ನೆಟ್ಟಿದೆ. ಆದರೆ, ರಾಜ್ಯದ ಅತ್ಯಂತ ಅಪರೂಪದ ಸಿಂಗಳೀಕ ಸಂರಕ್ಷಿತ ಅಭ್ಯಯಾರಣ್ಯವನ್ನೂ ಒಳಗೊಂಡಂತೆ ಮಹತ್ವದ ಜೀವ ಸಂಕುಲ, ಸಾವಿರಾರು ಎಕರೆ ಕಾಡು ಮತ್ತು ರೈತಾಪಿ ಜನರ ಜಮೀನು ನಾಶ ಮಾಡಿ, 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಜನರ ತೆರಿಗೆ ಹಣ ಪೋಲು ಮಾಡುವ ಈ ಯೋಜನೆ ಬಗ್ಗೆ ನಮ್ಮ ಸ್ಪಷ್ಟ ವಿರೋಧವಿದೆ. ಯಾಕೆಂದರೆ, ಜೀವ ನದಿಯನ್ನು ಬತ್ತಿಸಿ ಬೆಂಗಳೂರಿಗೆ ನೀರು ತರುವುದು ವೈಜ್ಞಾನಿಕವಾಗಿ ಮಾತ್ರವಲ್ಲದ, ವಿವೇಚನೆಯ ದೃಷ್ಟಿಯಿಂದಲೂ ಒಪ್ಪುವಂತಹ ಚಿಂತನೆಯಲ್ಲ".
"ಅಲ್ಲದೆ, ಎತ್ತಿನ ಹೊಳೆ ಯೋಜನೆ ಗಮನಿಸಿದರೆ ಇದು ಮೂಲತಃ ಗುತ್ತಿಗೆದಾರರ ಮೂಲಕ ಭ್ರಷ್ಟಾಚಾರದ ಹೊಳೆ ಹರಿಸುವ ಇನ್ನೊಂದು ಯೋಜನೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನಮ್ಮದೇ ಅಂಕೋಲದ ಶಿರೂರು, ನೆರೆಯ ಕೇರಳದ ವಯನಾಡಿನಲ್ಲಿ ಆಗಿರುವ ಬಚ್ಚಿಬೀಳಿಸುವ ದುರಂತಗಳು ಕಣ್ಣೆದುರೇ ಇರುವಾಗ ಪಶ್ಚಿಮಘಟ್ಟದ ಪ್ರಾಕೃತಿಕ ರಚನೆಯನ್ನೇ ಬುಡಮೇಲು ಮಾಡುವ ಇಂತಹ ಯೋಜನೆಗಳ ಬದಲು, ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಸರ್ಕಾರ ಯೋಚಿಸುವುದು ವಿವೇಕ. ಆದ್ದರಿಂದ ಶರಾವತಿ ನೀರು ತರುವ ಯೋಜನೆ ಕೈಬಿಟ್ಟು, ಬೆಂಗಳೂರಿಗೆ ಅಗತ್ಯವಿರುವ 15 ಟಿಎಂಸಿಗಿಂತ ಅಧಿಕ ನೀರು ಸಿಗುವ ಮಹಾನಗರದಲ್ಲಿ ಮಳೆ ನೀರು ಇಂಗಿಸುವ ಮತ್ತು ಕೆರೆಕಟ್ಟೆಗಳ ಪುನರುಜ್ಜಿವನ ಕೈಗೆತ್ತಿಕೊಳ್ಳುವುದು ವಿವೇಚನೆಯ ಮಾರ್ಗ. ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶರಾವತಿ ನೀರು ತರುವ ಪರಿಸರ ಘಾತುಕ, ಜೀವ ವಿರೋಧಿ ಯೋಜನೆಯನ್ನು ಕೈಬಿಡಬೇಕು. ಆ ಮೂಲಕ ನಾಡಿನ ಕಾಡು ಮತ್ತು ನಾಡಿನ ಸ್ವಾಸ್ಥ್ಯ ಕಾಯುವ ತನ್ನ ಹೊಣೆಗಾರಿಕೆ ತೋರಬೇಕು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಮೂಲಕ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ" ಎಂದು ಪತ್ರ ಬರೆದಿದ್ದಾರೆ.
ಪರಿಸರ ಪ್ರೇಮಿ ಕುಮಾರಸ್ವಾಮಿ ಅಭಿಪ್ರಾಯ: "ಸರ್ಕಾರದ ನಡೆ ಹಾಗೂ ವಾಸ್ತವದ ಸ್ಥಿತಿಗಳ ನಡುವೆ ತಾಳ ಮೇಳ ಇಲ್ಲದಂತೆ ಆಗಿದೆ. ಒಂದು ಕಡೆ ಕರ್ನಾಟಕದಲ್ಲಿ ವಿದ್ಯುಚ್ಛಕ್ತಿ ಸಾಲದು ಎಂದು ಹೇಳಿ, ಲಿಂಗನಮಕ್ಕಿಯ ತಳಕಳಲೆ ಬಳಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಮಾಡಲು ಹೊರಟಿದೆ. ಇಲ್ಲಿ ಸುಮಾರು 500 ಎಕರೆ ಕಾಡನ್ನು ಕಡಿದು ಯೋಜನೆ ಮಾಡಲು ಸಿದ್ಧರಾಗಿದ್ದಾರೆ. ಲಿಂಗನಮಕ್ಕಿ ಯೋಜನೆಯು ಸಂಪೂರ್ಣ ವಿದ್ಯುತ್ ಉತ್ಪಾದನೆಗಾಗಿಯೇ ಇರುವ ಯೋಜನೆ. ಇದರ ಕೊನೆಯ ಹನಿ ನೀರು ಸಹ ವಿದ್ಯುತ್ ಉತ್ಪಾದನೆಗೆ ಬಳಕೆ ಆಗಬೇಕೆಂದು ಡ್ಯಾಂ ನಿರ್ಮಾಣ ಮಾಡಲಾಗಿದೆ".
"ಆದರೆ ಸರ್ಕಾರ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವುದಕ್ಕಾಗಿ ಯೋಜನೆ ಮಾಡುವುದಾದರೆ, ಮೊದಲನೆಯದಾಗಿ ಕಳಮಟ್ಟದಲ್ಲಿ ಇರುವ ಡ್ಯಾಂನಿಂದ ಮೇಲ್ಮಟ್ಟದಲ್ಲಿರುವ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ವಿದ್ಯುತ್ ಬೇಕಾಗಿದೆ. ಹಿಂದೆ ಇದೇ ಯೋಜನೆಗೆ ಶಿವಮೊಗ್ಗ ಜಿಲ್ಲೆಯು ಒಂದಾಗಿ ಪ್ರತಿಭಟನೆ ನಡೆಸಿತ್ತು ಎಂಬುದನ್ನು ಸರ್ಕಾರ ಮರೆಯಬಾರದು. ಈಗ ಪುನಃ ಅದೇ ಯೋಜನೆ ಜಾರಿ ಮಾಡುವುದಾದರೆ ಮತ್ತೆ ದೊಡ್ಡ ಪ್ರತಿಭಟನೆ ಎದುರಿಸಬೇಕಾಗುತ್ತದೆ".
"1960ರಲ್ಲಿ ನೂರಾರು ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಲಿಂಗನಮಕ್ಕಿ ಯೋಜನೆಯನ್ನು ಮಾಡಲಾಗಿತ್ತು. ಈ ಯೋಜನೆ ಮುಗಿದು ದಶಕಗಳೇ ಕಳೆದರು ಇನ್ನೂ ಭೂಮಿ ಕಳೆದುಕೊಂಡ ಬಹುಪಾಲು ರೈತರಿಗೆ ಪರ್ಯಾಯ ಭೂಮಿಯನ್ನು ನೀಡಿಲ್ಲ. ಕೆಲವೊಂದು ಗ್ರಾಮಗಳಿಗೆ ತಂದು ಬಿಟ್ಟು, ಅವರ ಹೆಸರಿಗೆ ಯಾವುದೇ ದಾಖಲಾತಿಯ ಭೂಮಿಯನ್ನು ನೀಡಲಿಲ್ಲ. ಮೊದಲು ಭೂಮಿ ಕಳೆದುಕೊಂಡ ರೈತರಿಗೆ ಭೂಮಿ ನೀಡಬೇಕು. ಭೂಮಿ ನೀಡಿದ ನಂತರ ನೀರನ್ನು ತೆಗೆದುಕೊಂಡು ಹೋಗಬೇಕು. ಭೂಮಿ ಕಳೆದುಕೊಂಡ ರೈತರಿಗೆ ಭೂಮಿ ನೀಡದೆ ಒಂದು ಹನಿ ನೀರನ್ನು ತೆಗೆದುಕೊಂಡು ಹೋಗಲು ಜಿಲ್ಲೆಯ ಜನತೆ ಬಿಡಲ್ಲ" ಎಂದರು.
ಇದನ್ನೂ ಓದಿ: ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ: ಶಿಲ್ಪಿ ಕೃಷ್ಣ ನಾಯಕ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ - High Court