ಮಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕರ ಆತ್ಮಹತ್ಯೆ ಹಾಗೂ 187 ಕೋಟಿ ರೂ. ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಬಲಿಪಶುವಾಗಿದ್ದಾರೆ. ಆತ 20% ತಿಂದು ಸಿಕ್ಕಿಹಾಕಿಕೊಂಡರು. ಆದರೆ 80% ಹೊಡೆದವರು ಇನ್ನೂ ಸರ್ಕಾರದಲ್ಲಿದ್ದಾರೆ. ಆದ್ದರಿಂದ 80% ತಿಂದಿರುವ ಸಿದ್ದರಾಮಯ್ಯ ಆ್ಯಂಡ್ ಕಂಪನಿಯ ರಾಜೀನಾಮೆಗೆ ವಿಧಾನಸಭೆಯಲ್ಲಿ ಆಗ್ರಹಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಅಡಿಯಲ್ಲಿ ಹಣಕಾಸು ಇಲಾಖೆ ಬರುತ್ತದೆ. ಇದೆಲ್ಲಾ ಸಿಎಂ ಮೂಗಿನಡಿಯಲ್ಲಿಯೇ ನಡೆಯುವಂಥದ್ದು. ಇಷ್ಟೊಂದು ದೊಡ್ಡ ಮೊತ್ತ ಹೇಗೆ ಬೇನಾಮಿ ಖಾತೆಗೆ ಹೋಗಿದೆ. ಯಾವುದಾದರೂ ಅಧಿಕೃತ ಖಾತೆಗೆ ಹಣ ಹೋಗಿದ್ದರೆ, ಸಿದ್ದರಾಮಯ್ಯ ಪಾತ್ರ ಇಲ್ಲವೆನ್ನಬಹುದಿತ್ತು. ಈ ಹಣ ಎಲ್ಲಿಗೆ ಹೋಗಿದೆ, ರಾಹುಲ್ ಗಾಂಧಿಗೆ ಹೋಗಿದೆಯೇ, ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆಯೇ? ಉತ್ತರಿಸಲಿ. ಈಗಾಗಲೇ ಪ್ರಕರಣವನ್ನು ಸಿಬಿಐ ತೆಗೆದುಕೊಂಡು ತನಿಖೆ ಆರಂಭಿಸಿದೆ. ಅದಕ್ಕೆ ಸಿಎಂ ಬುಡಕ್ಕೆ ಪ್ರಕರಣ ಬರುತ್ತದೆಯೇ ಎಂದು ಭಯಬಿದ್ದು, ಸಚಿವರಿಂದ ರಾಜೀನಾಮೆ ಕೊಡಿಸಲಾಯಿತು ಎಂದರು.
ಮತ್ತೊಂದೆಡೆ, ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಆರ್.ಅಶೋಕ್, ಬೋಳಿಯಾರುವಿನಲ್ಲಿ ಬಿಜೆಪಿ ವಿಜಯೋತ್ಸವ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರನ್ನು ಬೈಕ್ನಲ್ಲಿ ಹಿಂಬಾಲಿಸಿ ಹಲ್ಲೆ ಮಾಡಲಾಗಿದೆ. ಮಸೀದಿಗೆ ಬಂದವರು ಡ್ರ್ಯಾಗರ್‌ನಿಂದ ಬಹಳ ಆಳವಾಗಿ ಚುಚ್ಚಿದ್ದಾರೆ. ಪೂರ್ವಸಿದ್ದತೆ ಇಲ್ಲದೆ ಮಸೀದಿಗೆ ಬಂದವರ ಕೈಯಲ್ಲಿ ಡ್ರ್ಯಾಗರ್ ಹೇಗೆ ಬಂತು?. ಡ್ರ್ಯಾಗರ್ ಸ್ಪೆಷಲಿಸ್ಟ್‌ಗಳು ಬಳಕೆ ಮಾಡುವಂಥದ್ದು. ಆದ್ದರಿಂದ ಇದೊಂದು ಪೂರ್ವನಿಯೋಜಿತ ಕೊಲೆ ಪ್ರಯತ್ನ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದಿಂದ ಕೋಮಸೌಹಾರ್ದತೆ ಹಾಳು: ಕಾಂಗ್ರೆಸ್ ಸರ್ಕಾರ ರಾಜ್ಯದ ಕೋಮಸೌಹಾರ್ದತೆಯನ್ನು ಹಾಳು ಮಾಡುತ್ತಿದೆ. ಕರ್ನಾಟಕದಲ್ಲಿ ಇರುವುದು ಮುಸಲ್ಮಾನ್ ಸರ್ಕಾರ ಎಂದು ಡಿಕೆಶಿ ಹಿಂದೆ ಹೇಳಿದ್ದು ಈಗ ನಿಜವಾಗುತ್ತಿದೆ. ಬೋಳಿಯಾರು ಘಟನೆಯ ಪೂರ್ತಿ ವಿಡಿಯೋ ನಾನು ನೋಡಿದ್ದೇನೆ. ಅಲ್ಲಿ 'ಭಾರತ್ ಮಾತಾಕಿ ಜೈ' ಎಂದು ಘೋಷಣೆ ಕೂಗಿದ್ದು ಬಿಟ್ಟರೆ ಬೇರೆ ಏನು ಘೋಷಣೆ ಕೂಗಿಲ್ಲ. ಪಾಕಿಸ್ತಾನದ ಕುನ್ನಿಗಳು ಎಂದು ಘೋಷಣೆ ಕೂಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಅವರನ್ನು ಕರೆಸಿದ್ದೇನೆ. ಅವರ ಬಳಿ ದಾಖಲೆಗಳಿದ್ದಲ್ಲಿ ಕೇಳುತ್ತೇನೆ ಎಂದರು.
ಭಾರತ್ ಮಾತಾಕಿ ಜೈ ಅಂದ್ರೆ ಅವರಿಗ್ಯಾಕೆ ಸಿಟ್ಟು?. ರಾಜ್ಯದಲ್ಲಿ ಭಾರತ್ ಮಾತಾಕಿ ಜೈ ಅಂದ್ರೆ ಡ್ರ್ಯಾಗರ್ ಅಲ್ಲಿ ಚುಚ್ಚಿಸಿಕೊಳ್ಳಬೇಕಾ?. ಕಾಂಗ್ರೆಸ್ ಮನಸ್ಥಿತಿ ಈ ರೀತಿಯಿದೆ. ಇಡೀ ಕರ್ನಾಟಕವನ್ನು ಕಾಂಗ್ರೆಸ್ ತಾಲಿಬಾನ್ ಮಾಡೋಕೆ ಹೊರಟಿದೆ. ಈ ತಾಲಿಬಾನ್ ಸರ್ಕಾರವನ್ನು ನಾವು ಬಗ್ಗು ಬಡಿತೇವೆ. ಇನ್ನು ಮುಗಿತು ಅವರ ಕತೆ. ಕರ್ನಾಟಕ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಮಹಾನಗರ ವಿಭಜನೆ ಬೇಡ: ಸಿಎಂ, ಡಿಸಿಎಂಗೆ ಪತ್ರ ಬರೆದ ಎನ್.ಆರ್.ರಮೇಶ್ - BJP Leader N R Ramesh