ತುಮಕೂರು: ಜಿಲ್ಲೆಯಲ್ಲಿ ಏ.26 ರಂದು ಲೋಕಸಭಾ ಚುನಾವಣೆಯ ಸಾರ್ವತ್ರಿಕ ಮತದಾನ ಶಾಂತಿಯುತವಾಗಿ ನಡೆಯಲು 825 ರೌಡಿ ಶೀಟರ್ಗಳಲ್ಲಿ 31 ಕುಖ್ಯಾತ ರೌಡಿಗಳನ್ನು ಮಾತ್ರ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದರು.
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಕುಣಿಗಲ್ ತಾಲೂಕಿನ ಮೋದೂರು ಗ್ರಾಮದ ನಟೋರಿಯಸ್ ಕುಣಿಗಲ್ ಗಿರಿಯನ್ನು ಗಡಿಪಾರು ಮಾಡಲಾಗಿದೆ. ಇನ್ನು ಸಾರ್ವಜನಿಕರ ವಲಯದಲ್ಲಿ ಅಶಾಂತಿ ಮೂಡಿಸುವ 1200 ಮಂದಿ ರೌಡಿಗಳ ಚಟುವಟಿಕೆ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಪೊಲೀಸ್, ನೋಡಲ್ ಆಫೀಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಂತಿಯುತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಬೈಕ್ ಕಳ್ಳತನ, ಮೂವರು ಎಳನೀರು ವ್ಯಾಪಾರಿಗಳ ಬಂಧನ: ಮತ್ತೊಂದೆಡೆ, ತುಮಕೂರು ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಎಳನೀರು ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿ, 7 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎನ್ಆರ್ ಕಾಲೋನಿಯ ಸುದೀಪ್ (24 ), ರಾಮಮೂರ್ತಿ ಹಾಗೂ ಕಂಬತ್ತನಳ್ಳಿಯ ರಂಗನಾಥ್ ಬಂಧಿತರು. ತುಮಕೂರು ತಾಲೂಕಿನ ನಾಗವಲ್ಲಿಯ ಗಂಗರಾಜು ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. 4.60 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಂಧನದಿಂದ ತುಮಕೂರು ಜಿಲ್ಲೆಯ ಹೆಬ್ಬೂರು ಪೊಲೀಸ್ ಠಾಣೆಯ 1, ಕ್ಯಾತಸಂದ್ರ ಪೊಲೀಸ್ ಠಾಣೆಯ 1, ಜಯನಗರ ಪೊಲೀಸ್ ಠಾಣೆಯ 1, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ 1, ಹೊಸ ಬಡಾವಣೆ ಪೊಲೀಸ್ ಠಾಣೆಯ 1 ಹಾಗೂ ತುಮಕೂರು ನಗರ ಪೊಲೀಸ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ರಾಯಚೂರು: ಮಗಳಿಗೆ ರಕ್ಷಣೆ ನೀಡಿದ ಪೋಷಕರು, ಸಂಬಂಧಿಕರ ಮೇಲೆ ಹಲ್ಲೆ - Attack On Parents