ಬೆಂಗಳೂರು : ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಸೆಪ್ಟೆಂಬರ್ ಅಂತ್ಯಕ್ಕೆ ಪ್ರಾಯೋಗಿಕ ಸಂಚಾರ ನಡೆಸಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಿಂದ ಆಗಮಿಸಿರುವ ಹಳದಿ ಮಾರ್ಗದ ಮೊದಲ ರೈಲು ಜೂನ್ ಅಂತ್ಯದ ವೇಳೆ ಸಿಗ್ನಲಿಂಗ್ ಪರೀಕ್ಷೆಗೆ ಒಳಗಾಗಲಿದೆ. ಜೂನ್ ಅಂತ್ಯದಿಂದ 45 ದಿನಗಳವರೆಗೆ ಸಿಗ್ನಲಿಂಗ್, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಸೇರಿ ಸಿಸ್ಟಮ್ ಪರೀಕ್ಷೆಗಳು ನಡೆಯಲಿವೆ. ಬಳಿಕ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ ಆರ್ಗನೈಸೇಶನ್ ಮೂಲಕ ಆಸಿಲೇಷನಲ್ ಟ್ರಯಲ್ಸ್, ಕಮಿಷನರ್ ಆಫ್ ಮೆಟ್ರೋ ರೈಲ್ ಸೇಪ್ಟಿಯಿಂದ ತಪಾಸಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಚೀನಾದಿಂದ ರೈಲು ಫೆಬ್ರವರಿಯಲ್ಲಿ ಬೆಂಗಳೂರು ತಲುಪಿತ್ತು. ಈ ರೈಲು ಮಾರ್ಚ್ ಮೊದಲ ವಾರದಿಂದ ಪರೀಕ್ಷಾರ್ಥವಾಗಿ ಸಂಚರಿಸಿದೆ. ಸದ್ಯ ಆರ್. ವಿ ರಸ್ತೆ ಮತ್ತು ಬೊಮ್ಮಸಂದ್ರ ಸಂಪರ್ಕಿಸುವ 19.15 ಕಿ.ಮೀ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ವಿದ್ಯುದ್ದೀಕರಣ ಪ್ರಕ್ರಿಯೆ ನಡೆಯುತ್ತಿದೆ. ಮೆಟ್ರೋ ವಯಡಕ್ಟ್ ಮೂಲಕ 33 ಕಿಲೋವಾಟ್ ವಿದ್ಯುತ್ ಕೇಬಲ್‌ಗಳು ಹಾದುಹೋಗಿದ್ದು, ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ತಜ್ಞರ ತಂಡ ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ, ಲೋಪದೋಷಗಳನ್ನು ಪಟ್ಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಹಳದಿ ಮಾರ್ಗದ 2ನೇ ರೈಲು ಬರಲಿದೆ. ಪರೀಕ್ಷಾರ್ಥ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಆ ರೈಲಿನ ವೇಗ, ನಿಲ್ದಾಣದಿಂದ ನಿಲ್ದಾಣಕ್ಕೆ ತಲುಪುವ ಸಮಯ ಇತ್ಯಾದಿ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯ ಪರೀಕ್ಷೆ ಪೂರ್ಣಗೊಂಡ ಬಳಿಕ ತಜ್ಞರ ಶಿಫಾರಸುಗಳನ್ನು ಆಧರಿಸಿ, ಸೆಪ್ಟೆಂಬರ್ ಅಂತ್ಯದಿಂದ ಪ್ರಾಯೋಗಿಕ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇದು ಯಶಸ್ವಿಯಾಗುತ್ತಿದ್ದಂತೆ ವಾಣಿಜ್ಯ ಸೇವೆ ಪ್ರಾರಂಭಿಸಲು ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಟಿ.ಸಿ.ಎಸ್ 10ಕೆ ಓಟ: ಭಾನುವಾರ ಬೆಳಗಿನಜಾವ 3.35ಕ್ಕೆ ಪ್ರಾರಂಭವಾಗಲಿದೆ ನಮ್ಮ ಮೆಟ್ರೋ ಸೇವೆ - TCS World 10K