ಬೆಂಗಳೂರು: ನಗರ್ತಪೇಟೆ ಗಲಾಟೆ ವಿಚಾರವನ್ನು ಬಿಜೆಪಿಯವರು ಸ್ವಾರ್ಥಕ್ಕೋಸ್ಕರ ಬಳಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು. ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೂರಿನಲ್ಲಿ ಎಲ್ಲಿ ಕೂಡ ಪ್ರಸ್ತಾಪವಿಲ್ಲ. ಹನುಮಾನ್ ಚಾಲೀಸಾ, ಆಜಾನ್ ಬಗ್ಗೆ ಪ್ರಸ್ತಾಪ ಇಲ್ಲ, ಗಲಾಟೆ ಮಾಡಿದವರು ತಪ್ಪು ಮಾಡಿದ್ದಾರೆ, ಬೆದರಿಕೆ ಹಾಕಿದ್ದು ತಪ್ಪು. ಆದರೆ, ಇದಕ್ಕೆ ಬೇರೆ ಬಣ್ಣ ಕೊಟ್ಟು ವಿಷಯ ಹರಡಲಾಗುತ್ತಿದೆ. ಎಫ್ಐಆರ್ನಲ್ಲೂ ಎಲ್ಲೂ ಹನುಮಾನ ಚಾಲೀಸಾ ಮತ್ತು ಆಜಾನ್ ಬಗ್ಗೆ ಉಲ್ಲೇಖ ಇಲ್ಲ. ಒಬ್ಬ ಎಂಪಿ ತೇಜಸ್ವಿ ಸೂರ್ಯ ದ್ವೇಷದ ವಾತಾವರಣ ಸೃಷ್ಟಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.
''ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಬೇಕು. ಅನಾವಶ್ಯಕವಾಗಿ ಭಯ ಹುಟ್ಟಿಸಲಾಗುತ್ತಿದೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಅಂತ ಬಿಂಬಿಸ್ತಿದ್ದಾರೆ. ಇವರೇ ಸೃಷ್ಟಿ ಮಾಡಿ ಭಯ ಮೂಡಿಸ್ತಿದ್ದಾರೆ. ಕ್ಷುಲ್ಲಕ ಕೀಳುಮಟ್ಟದ ಯೋಚನೆ ಬಿಜೆಪಿಯವರದ್ದು. ನಮಗೆ ವೋಟು ಮುಖ್ಯ ಎಂಬುದಷ್ಟೇ ಇವರಿಗೆ. ಏನಾದ್ರೂ ಆಗಲಿ ವೋಟು ಮುಖ್ಯ ಅಂತಾರೆ'' ಎಂದು ಕಿಡಿಕಾರಿದರು.
''ಚುನಾವಣಾ ಬಾಂಡ್ ಮೋಸ ಇಡೀ ವಿಶ್ವದಲ್ಲೆಲ್ಲೂ ಆಗಿಲ್ಲ. ಭ್ರಷ್ಟಾಚಾರಕ್ಕೆ ಕಾನೂನಾತ್ಮಕ ಅಂಶ ಸೇರಿಸಿದ್ರು. ಐಟಿ, ಇಡಿ ರೇಡ್ ಆದವರಿಂದ ಹಣ ಕಲೆಕ್ಟ್ ಮಾಡಿದ್ದಾರೆ. ಇವರಿಂದಾಗಿ ಮಾಫಿಯಾ ರಾಜಕಾರಣ ನಡೆಯುತ್ತಿದೆ. ವ್ಯಕ್ತಿ, ಮೀಡಿಯಾ, ಉದ್ದಿಮೆದಾರರು ಎಲ್ಲರಿಗೂ ಬೆದರಿಕೆ. ಎಕ್ಸ್ಟಾರ್ಷನ್ ಥ್ರೆಟ್ ಇದೇ ಆಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ 1% ನೈತಿಕತೆ ಇಲ್ಲ'' ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಈಗ ಜೆಡಿಎಸ್ ಬಿಜೆಪಿ ಕೈಲಿ ಸಿಕ್ಕಿಕೊಂಡಿದೆ: ''ಈಗ ಜೆಡಿಎಸ್ ಪಕ್ಷವು ಬಿಜೆಪಿ ಕೈಲಿ ಸಿಕ್ಕಿಕೊಂಡಿದೆ. ಜನತಾ ದಳ ಮುಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಮುಗಿಸಬೇಕು ಎಂಬುದು ಒಂದು ಕಡೆ. ಇನ್ನೊಂದು ಕಡೆ ಪ್ರಾದೇಶಿಕ ಪಕ್ಷ ಇರಬಾರದು ಅಂತ ಬಯಸ್ತಾರೆ. ಮೋದಿ ಬಂದ್ರು ಹೆಚ್ಡಿಕೆ ವೇದಿಕೆಗೂ ಒಮ್ಮೆಯೂ ಕರೆಯಲಿಲ್ಲ. ಇವರು ಮಾತ್ರ ದೆಹಲಿಗೆ ಹೋಗಬೇಕು. ಅವರು ಬಂದಾಗ ಒಮ್ಮೆಯೂ ಕರೆಯಲ್ಲ. ಕುಮಾರಸ್ವಾಮಿಗೆ ಅವರ ತಪ್ಪು ಈಗ ಅರಿವಾಗುತ್ತಿರಬಹುದು. ಆದರೆ, ತಡವಾಗಿಬಿಟ್ಟಿದೆ. ಈಗ ಜೆಡಿಎಸ್ ಪಕ್ಷವು ಬಿಜೆಪಿ ಕೈಲಿ ಸಿಕ್ಕಿಕೊಂಡಿದೆ. ಹೊರಗೆ ಬರುವುದಕ್ಕೂ ಕೂಡ ಈಗ ಕಷ್ಟ. ಈಗಾಗಲೇ ಜೆಡಿಎಸ್ ಎಕ್ಸ್ಪೋಸ್ ಆಗಿಬಿಟ್ಟಿದೆ. ಹೆಚ್ಡಿಕೆಗೆ ತಪ್ಪು ಮಾಡಿದ್ದೇನೆ ಅಂತ ಅನಿಸುತ್ತಿರಬಹುದು. ಆದರೆ, ತಪ್ಪು ಸರಿ ಮಾಡಿಕೊಳ್ಳಲು ಸದ್ಯಕ್ಕೆ ಕಷ್ಟ'' ಎಂದು ಗುಂಡೂರಾವ್ ಹೇಳಿದರು.
ಇದನ್ನೂ ಓದಿ: ಬಿಜೆಪಿ ಚಿಹ್ನೆಯಿಂದ ದೇವೇಗೌಡರ ಅಳಿಯನ ಸ್ಪರ್ಧೆ ಜೆಡಿಎಸ್ನ ಮೊದಲ ಸೂಸೈಡ್ ಅಟೆಂಪ್ಟ್: ಡಿಕೆಶಿ ವ್ಯಂಗ್ಯ