ಮೈಸೂರು: ರಾಜ್ಯದಲ್ಲಿ ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ಮುಂದೆ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರಕಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.
![ಅಧಿಕಾರಿಗಳೊಂದಿಗೆ ಸೋಮಣ್ಣ ಸಭೆ](https://etvbharatimages.akamaized.net/etvbharat/prod-images/13-09-2024/ka-mys-04-13-09-2024-somanna-press-meet-news-7208092_13092024185918_1309f_1726234158_86.jpg)
ಮೈಸೂರು ವಿಭಾಗೀಯ ರೈಲ್ವೆ ನಿರ್ವಹಣಾ ಕಚೇರಿಯ ಸಭಾಂಗಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿ ಹೆಚ್ಚು ಜವಾಬ್ದಾರಿಯನ್ನು ಹೊಂದಿರುವ ರೈಲ್ವೆ ಇಲಾಖೆಯು ರಾಷ್ಟ್ರದ ವಿಕಾಸದ ಇಂಜಿನ್ನಂತೆ ಕಾರ್ಯನಿರ್ವಹಿಸುತ್ತದೆ. ಹೊರ ರಾಷ್ಟ್ರದವರು ವಿಕಸಿತ ಭಾರತದ ರೈಲ್ವೆ ಇಲಾಖೆಯ ಅಭಿವೃದ್ಧಿಯ ಬಗ್ಗೆ ಮಾತನಾಡುವಂತೆ ಮಾಡಬೇಕು ಎಂದರು.
![ಅಶೋಕಪುರಂ ಹಾಗೂ ಮುಖ್ಯ ರೈಲ್ವೆ ನಿಲ್ದಾಣಕ್ಕೆ ವಿ.ಸೋಮಣ್ಣ ಭೇಟಿ](https://etvbharatimages.akamaized.net/etvbharat/prod-images/13-09-2024/ka-mys-05-13-09-2024-minister-somanna-kannada-lesson-video-storty-7208092_13092024193901_1309f_1726236541_291.jpg)
ಪ್ರತಿ ವರ್ಷವು 124 ಕಿ.ಮೀ ರೈಲ್ವೆ ಲೈನ್ಗಳು ಹೆಚ್ಚಾಳವಾಗುತ್ತಿದೆ. 333 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದ 15 ರೈಲ್ವೆ ಸ್ಟೇಷನ್‌ಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, 2025ಕ್ಕೆ ಈ ಯೋಜನೆಯು ಪೂರ್ಣಗೊಳ್ಳಲಿದೆ. ಪ್ರಸ್ತುತ ಮೈಸೂರಿನಲ್ಲಿ 80 ರೈಲುಗಳ ಸಂಚಾರವಿದ್ದು, ಮುಂಬರುವ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆಯಿದೆ ಎಂದು ಮಾಹಿತಿ ನೀಡಿದರು.
ಮೈಸೂರು-ಕುಶಾಲನಗರ ನಡುವೆ 89 ಕಿ.ಮೀ ರೈಲು ಮಾರ್ಗ ನಿರ್ಮಾಣ ಹಾಗೂ ಚಾಮರಾಜನಗರದಲ್ಲಿ ಸುಮಾರು 142 ಕಿ.ಮೀ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಲ್ಲದೇ ಹಲವಾರು ಪ್ರದೇಶಗಳಿಗೆ ರೈಲಿನ ಸೌಲಭ್ಯ ಸಿಕ್ಕಂತಾಗುತ್ತದೆ. ಬಡವರು ಮತ್ತು ಜನಸಾಮಾನ್ಯರಿಗೆ ಸಹಾಯವಾಗುವಂತೆ ತುಮಕೂರು, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಮೆಮು ರೈಲುಗಳನ್ನು ತರಲಾಗಿದ್ದು, ಇದೇ ತಿಂಗಳ 27ನೇ ತಾರೀಖಿನಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಕನ್ನಡ ಕಲಿಯಿರಿ ಎಂದು ಸೋಮಣ್ಣ: ಮತ್ತೊಂದೆಡೆ, ಕೇಂದ್ರ ಸಚಿವ ವಿ. ಸೋಮಣ್ಣ ಇಂದು ಮೈಸೂರಿನ ಅಶೋಕಪುರಂ ಹಾಗೂ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಸ್ವಚ್ಛತಾ ಸಿಬ್ಬಂದಿಗಳು ಹಾಗೂ ನಿಲ್ದಾಣದ ಸಿಬ್ಬಂದಿಗಳಿಂದ ಮಾಹಿತಿ ಪಡೆದ ಸೋಮಣ್ಣ, ಅಧಿಕಾರಿಗಳಿಗೆ ನೀವು ಸ್ಥಳೀಯ ಭಾಷೆಯಾದ ಕನ್ನಡ ಕಲಿತರೆ ಒಳ್ಳೆಯದು. ಇದ್ದರಿಂದ ಜನರ ಸಮಸ್ಯೆ ಗೊತ್ತಾಗುತ್ತದೆ. ಕನ್ನಡ ತುಂಬಾ ಸುಲಭದ ಭಾಷೆ, ಕನ್ನಡ ಕಲಿಯಿರಿ. ಮೂರು ತಿಂಗಳಿನಲ್ಲಿ ಕನ್ನಡ ಕಲಿಯಬಹುದು. ನಾನು ಸಹ ಹಿಂದಿ ಕಲಿಯುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಕಾರುಗಳ 'ಪಯಣ'ದ ಜಗತ್ತು ಅನಾವರಣ - Vintage cars museum