ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ - ಜೆಡಿಎಸ್ ದೋಸ್ತಿಗಳು ಮೈಸೂರು ಚಲೋ ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ ಆರಂಭಿಸಿದ್ದಾರೆ. ಈ ವೇಳೆ, ದೋಸ್ತಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಪಣತೊಟ್ಟರು. ಕೆಂಗೇರಿ ನೈಸ್ ಜಂಕ್ಷನ್ ಬಳಿ ಪಾದಯಾತ್ರೆ ಉದ್ಘಾಟನಾ ಸಮಾವೇಶ ನಡೆಸಿದ ದೋಸ್ತಿ ನಾಯಕರು ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ವಾಗ್ದಾಳಿ ನಡೆಸಿದರು.
Live:- ಮೈಸೂರು ಚಲೋ ಪಾದಯಾತ್ರೆ | Day 01 |#MysoreChalo #BJPJDSPadayatre #ScamSarkarahttps://t.co/9PYyS3Hzke
— BJP Karnataka (@BJP4Karnataka) August 3, 2024
ಒಗ್ಗಟ್ಟಿನ ಪ್ರದರ್ಶನ ಮಾಡಿದ ಬಿಜೆಪಿ - ಜೆಡಿಎಸ್ ನಾಯಕರು, ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ದೋಸ್ತಿ ನಾಯಕರು ನಗಾರಿ ಭಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ರಾಧಾಮೋಹನ್ ದಾಸ್, ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ನಗಾರಿ ಭಾರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದರು.
ಕಾಂಗ್ರೆಸ್ ಸರ್ಕಾರವನ್ನೇ ಕಿತ್ತೊಗೆಯಲಿದ್ದೇವೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, "ಮೈಸೂರು ಚಲೋ ಪಾದಯಾತ್ರೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಕಿತ್ತೊಗೆದೆಯೋದು ಮಾತ್ರ ಅಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಕಿತ್ತೊಗೆಯಲಿದೆ" ಎಂದು ಎಚ್ಚರಿಕೆ ನೀಡಿದರು. "ಸರ್ಕಾರ ವಚನ ಭ್ರಷ್ಟತೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ತುಳಿತಕ್ಕೊಳಗಾದ ಸಮಾಜಕ್ಕೆ ನ್ಯಾಯ ಕೊಟ್ಟಿಲ್ಲ. ಮೈಸೂರಿನ ಬಡ ಜನರಿಗೆ ಸಿದ್ದರಾಮಯ್ಯ ನಿವೇಶನ ಕೊಟ್ಟಿಲ್ಲ. ಬದಲಾಗಿ ಐದು ಸಾವಿರ ಕೋಟಿ ಭ್ರಷ್ಟಾಚಾರ ನಡೆಸಲಾಗಿದೆ" ಎಂದು ಆರೋಪಿಸಿದರು.
"ಭ್ರಷ್ಟಾಚಾರ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡ್ತಿದ್ದಾರೆ. ಕರ್ನಾಟಕ ರಾಜ್ಯದ ಹಣವನ್ನು ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ಕಾಣಿಕೆ ಕೊಡಲಾಗ್ತಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್, ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕುವ ಸಂಕಲ್ಪ ಮಾಡಲಾಗಿದೆ. ಕಾಂಗ್ರೆಸ್ ಬೆದರಿಕೆ, ಡಿಕೆಶಿ ಬೆದರಿಕೆಯಿಂದ ಪಾದಯಾತ್ರೆ ತಡೆಯಲು ಅಸಾಧ್ಯ. ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ" ಎಂದು ವಾಗ್ದಾಳಿ ನಡೆಸಿದರು.
ಗೌರವಯುತವಾಗಿ ರಾಜೀನಾಮೆ ನೀಡಲಿ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಯಸ್.ಯಡಿಯೂರಪ್ಪ, "ಭ್ರಷ್ಟಾಚಾರದಲ್ಲಿ ಸಿಲುಕಿ ರಾಜೀನಾಮೆ ಕೊಡಲು ಸಿದ್ಧರಿರುವ ಸಿಎಂ ಸಿದ್ದರಾಮಯ್ಯ ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ಮಧ್ಯೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ನಿಶ್ಚಿತ. ಹಗಲು ದರೋಡೆ ಮಾಡುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲವಾದರೆ ಜನ ನಿಮ್ಮನ್ನು ಕ್ಷಮಿಸಲ್ಲ. ಬದಲಾವಣೆ ತರುವುದಕ್ಕೆ ನೀವೇ ಮುಂಚೂಣಿಯಲ್ಲಿ ಇರಬೇಕು" ಎಂದು ಆಗ್ರಹಿಸಿದರು.
ಪೂರ್ವಾನುಮತಿ ಕೊಟ್ಟರೆ ನಿಮ್ಮ ಕತೆ ಏನು?: ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, "ನಮ್ಮನ್ನು ಜನ ಆಯ್ಕೆ ಮಾಡಿರುವುದು ಅಭಿವೃದ್ಧಿಗಾಗಿ ಕೆಲಸ ಮಾಡಲು. ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಜನ ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಸಿದ್ದರಾಮಯ್ಯ ನಾನು ಭ್ರಷ್ಟಾಚಾರಿ ಅಲ್ಲ ಅಂತಾರೆ. ಸಾಮಾನ್ಯನಿಗೆ ಮನೆ ಕಟ್ಟಲು ಎಷ್ಟು ಸೈಟ್ ಬೇಕು? ಆದರೆ ಸಿದ್ದರಾಮಯ್ಯ ಅವರಿಗೆ 14 ಸೈಟು ಬೇಕು. ಅದೂ ದಲಿತರ ಜಮೀನು ಬೇಕು. ರಾಜ್ಯಪಾಲರಿಗೆ ಪ್ರಶ್ನೆ ಮಾಡುವ ಅಧಿಕಾರ ಇದೆಯಾ ಅಂತ ಕೇಳಿದ್ದಾರೆ. ಯಡಿಯೂರಪ್ಪ ಇದ್ದಾಗ ಖಾಸಗಿ ವ್ಯಕ್ತಿ ದೂರು ಕೊಟ್ಟಾಗ ರಾಜೀನಾಮೆ ಕೊಟ್ಟಿದ್ದರು. ಆಗ ಇದ್ದ ಅಂಬೇಡ್ಕರ್ ಸಂವಿಧಾನವೇ ಈಗಲೂ ಇರುವುದು. ನೋಟೀಸ್ಗೆ ಗಡಗಡ ನಡುಗುತ್ತಿದ್ದೀರಿ. ಇನ್ನು ಪೂರ್ವಾನುಮತಿ ಕೊಟ್ಟರೆ ನಿಮ್ಮ ಕಥೆ ಏನು? ಕಾಂಗ್ರೆಸ್ ಇಂದು ಒಡೆದ ಮನೆಯಾಗಿದೆ. ನಮ್ಮ ಹೋರಾಟ ಸಿದ್ದರಾಮಯ್ಯರ ರಾಜೀನಾಮೆಗಾಗಿ. ಕಾಂಗ್ರೆಸ್ ಪಾರ್ಟಿಗೆ ಹಾರ್ಟ್ ಅಟ್ಯಾಕ್ ಆಗಲಿದೆ. ನಾವು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ" ಎಂದು ಕಿಡಿ ಕಾರಿದರು.
ರಾಜೀನಾಮೆ ನೀಡುವ ನಂಬಿಕೆ ಇದೆ: ಈ ಸಂದರ್ಭ ಮಾತನಾಡಿದ ಮಾಜಿ ಸಿಎಂ ಸದಾನಂದ ಗೌಡ, "ಅಧಿಕಾರದಲ್ಲಿ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಲಜ್ಜೆಗೆಟ್ಟ ಸಿದ್ದರಾಮಯ್ಯ ಸರ್ಕಾರ ಇನ್ನಷ್ಟು ಉಂಡು ತಿಂದು ನೀರು ಕುಡಿಯುವ ಮನಸ್ಥಿತಿಯಲ್ಲಿದೆ. ಭಸ್ಮಾಸುರರಾಗಿ ಜನರ ತಲೆ ಮೇಲೆ ಕೈ ಇಟ್ಟಿದ್ದಾರೆ. ನಾನು ಸತ್ಯ ಹರಿಶ್ಚಂದ್ರ ಅಂತಾರೆ. ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ ಅಂತಿದ್ದರು. ಇಂದು ಅವರ ಬಣ್ಣ ಬಯಲಾಗಿದೆ. ಆದರೂ ರಾಜೀನಾಮೆಗೆ ಮನಸ್ಸು ಮಾಡುತ್ತಿಲ್ಲ. ಸಿಎಂ ರಾಜ್ಯದ ಜನರ ಮನಸ್ಸಿನ ಭಾವನೆಗೆ ಗೌರವ ಕೊಟ್ಟು ರಾಜೀನಾಮೆ ಕೊಡಬೇಕು. ಇಲ್ಲವಾದರೆ ನಾವು ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಸಿಎಂ ಸಿದ್ದರಾಮಯ್ಯ ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡುವ ನಂಬಿಕೆ ಇದೆ" ಎಂದರು.
ಬಾಯಿಗೆ ಬಂದಂತೆ ಮಾತನಾಡಬೇಡಿ: ಇದೇ ವೇಳೆ ಮಾತನಾಡಿದ ಹೆಚ್.ವಿಶ್ವನಾಥ್, "ರಾಜ್ಯದ ರಾಜ್ಯಪಾಲರು ನಿಮಗೆ ನೋಟಿಸ್ ಕೊಟ್ಟಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ನೋಟಿಸ್ಗೆ ಉತ್ತರ ಕೊಡುವ ಬದಲು ಏನೇನೋ ಮಾತನಾಡುತ್ತಿದ್ದಾರೆ. ರಾಜ್ಯಪಾಲರ ಪತ್ರಕ್ಕೆ ಉತ್ತರ ಕೊಡದೇ ನೀವು ಆ ಏಜೆಂಟ್, ಈ ಏಜೆಂಟ್ ಅನ್ನೋದು ಸರಿಯಲ್ಲ. ಗಂಭೀರವಾಗಿ ರಾಜ್ಯಪಾಲರ ನೋಟಿಸ್ಗೆ ಉತ್ತರ ನೀಡಿ. ಈ ನೋಟಿಸ್ ರಾಜ್ಯ ಸರ್ಕಾರದ ವಿರುದ್ಧ ಅಲ್ಲ. ಸಿದ್ದರಾಮಯ್ಯ ನಾವು ನೀವು ಒಟ್ಟಿಗೆ ಬೆಳೆದವರು. ಒಟ್ಟಿಗೆ ಲಾ ಓದಿದ್ದೇವೆ. ಏನಪ್ಪಾ ಈ ಕಥೆ? ನೀವು ಲಾ ಓದಿ ಕಾನೂನು ವಿರುದ್ಧವಾಗಿ ಹೋಗುತ್ತಿದ್ದೀರಿ. ದಯವಿಟ್ಟು ನಿಮ್ಮ ಸ್ಥಾನದಿಂದ ರಾಜೀನಾಮೆ ಕೊಡಿ. ಬಾಯಿಗೆ ಬಂದಂತೆ ಏನೇನು ಮಾತನಾಡಬೇಡಿ" ಎಂದರು.
"ಮುಡಾದಲ್ಲಿ ಬಹುಕೋಟಿ ಹಗರಣ ನಡೆದಿದೆ. ನಗರಾಭಿವೃದ್ಧಿ ಸಚಿವ ಯಾಕೆ ಹೊರಗಡೆ ಇದ್ದಾನೆ. ಅವನನ್ನು ಏಕೆ ಬಂಧನ ಮಾಡಿಲ್ಲ? ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಒಂದು ನ್ಯಾಯ, ಮುಡಾದಲ್ಲಿ ಇನ್ನೊಂದು ನ್ಯಾಯನಾ? ರಾಜ್ಯಪಾಲರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಬೇಡಿ. ಅವರು ಯಾವುದೇ ಪಕ್ಷದ ಏಜೆಂಟ್ ಅಲ್ಲ" ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಸೂಚನೆ ಮೇರೆಗೆ ಲೂಟಿ ಆರೋಪ: ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್ ದಾಸ್ ಮಾತನಾಡಿ, "ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ಸೂಚನೆ ಮೇರೆಗೆ ರಾಜ್ಯದ ಜನರ ಹಣ ಲೂಟಿ ಮಾಡುತ್ತಿದ್ದಾರೆ. ಆ ಹಣವನ್ನು ಹೈ ಕಮಾಂಡ್ಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ಆಂಧ್ರಪ್ರದೇಶ ಚುನಾವಣೆಯಲ್ಲಿ ಬಳಕೆ ಮಾಡಿದ್ದಾರೆ. ಎಸ್ಸಿ, ಎಸ್ಟಿ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ. ಸಿಬಿಐಗೆ ತನಿಖೆ ಮಾಡದಂತೆ ಡಿಕೆಶಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ. ಈಗ ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರ ನೋಟಿಸ್ಗೆ ಉತ್ತರ ಕೊಡಲ್ಲ ಅಂತಾರೆ. ನೀವು ಉತ್ತರ ಕೊಟ್ಟಿಲ್ಲ ಅಂದರೆ ನಿಮ್ಮ ವಿರುದ್ಧ ಕಾನೂನು ಹೋರಾಟ ನಿಲ್ಲಲ್ಲ. ಜನರ ದುಡ್ಡನ್ನು ಲೂಟಿ ಮಾಡಿದ್ದೀರಿ ಅದನ್ನು ವಾಪಾಸು ಜನರಿಗೆ ಕೊಡುತ್ತೇವೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮೈಸೂರು ಚಲೋಗೆ ಚಾಲನೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಗಾರಿ ಬಾರಿಸಿದ ದೋಸ್ತಿಗಳು! - Mysuru Chalo padayatra