ಮೈಸೂರು: ಹಿಂದಿನ ಎರಡು ಬಾರಿಯೂ ಪಕ್ಷ ಹಾಗೂ ಕ್ಷೇತ್ರದ ಜನರ ಆಶೀರ್ವಾದದಿಂದ ಗೆದ್ದಿದ್ದೇನೆ. ಮುಂದೆಯೂ ಸಹ ಪಕ್ಷ ತೀರ್ಮಾನ ಮಾಡಿದರೆ ಖಂಡಿತವಾಗಿಯೂ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಿಮ್ಮ ಆಕಾಂಕ್ಷೆಯಂತೆ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಆಗಲಿದ್ದೇನೆ. ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನಲ್ಲಿ ಇಂದು ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾನು ಜನರಲ್ಲಿ ಮತ್ತೊಮ್ಮೆ ಆಶೀರ್ವಾದ ಕೇಳುತ್ತಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. 2014 ಮತ್ತು 2019ರ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನರು ಸತತವಾಗಿ ಗೆಲ್ಲಿಸಿದ್ದೀರಿ. ಮುಂದೆಯೂ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಚುನಾವಣೆಯ ನಂತರ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿಯ ಮೇಲೆ ಮತ ಕೇಳಲು ನಾವು ಮುಂದಾಗುತ್ತೇವೆ. ಕಳೆದ 10 ವರ್ಷಗಳಲ್ಲಿ ನಾನು ಏನೇನು ಕೆಲಸ ಮಾಡಿದ್ದೇನೆ, ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿದ್ದೇನು ಎಂಬ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳೂ ಸಹ ಇದರಲ್ಲಿವೆ. ಇದರ ಜೊತೆಗೆ ಪ್ರತಾಪ್ ಸಿಂಹ ಏನು ಕೊಡುಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಹತ್ತು ಹಲವು ಯೋಜನೆಗಳ ಸಂಪೂರ್ಣ ಮಾಹಿತಿ ಇದೆ. ಮುಂದಿನ ಅವಧಿಯಲ್ಲಿ ಮೈಸೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಕೂಡ ನಿರ್ಮಾಣ ಆಗುತ್ತದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಜನರ ಆಶೀರ್ವಾದ ಕೇಳುತ್ತಿದ್ದೇನೆ ಎಂದರು.
4 ಕ್ಷೇತ್ರ ಬಿಜೆಪಿ ತೆಕ್ಕೆಗೆ-ಎಸ್.ಎ.ರಾಮದಾಸ್: ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾರ್ಯಾಲಯ ವಿಶೇಷವಾಗಿ ಸಮನ್ವಯ ಕೇಂದ್ರವಾಗಲಿದೆ. ಯೋಜನೆಯ ಕಾರ್ಯತಂತ್ರ ಈ ಕಾರ್ಯಾಲಯದಲ್ಲಿ ಆಗಲಿದೆ. ದೇಶದಲ್ಲಿ ಹಾಲಿ ಸಂಸದರ ಜೊತೆಯಲ್ಲಿ 68 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಲಾಗುವುದು. ಬಿಜೆಪಿ ಜೆಡಿಎಸ್ ಒಟ್ಟಿಗೆ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಬಾರಿ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತೇವೆ ಎಂದು ತಿಳಿಸಿದರು.
ಮೋದಿ ಅವರ ಎರಡನೇ ಆವೃತ್ತಿಯಲ್ಲಾದ ಅಭಿವೃದ್ಧಿ ಮೂಲಕ ಮತಯಾಚನೆ ಮಾಡುತ್ತೇವೆ. ಮೈಸೂರು ಲೋಕಸಭಾ ಕ್ಷೇತ್ರವನ್ನು ನಿಶ್ಚಿತವಾಗಿ ಗೆಲ್ಲುತ್ತೇವೆ. ಮೈಸೂರು ಭಾಗದ ನಾಲ್ಕು ಲೋಕಸಭೆ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬೀಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ: ಚುನಾವಣಾ ಬಾಂಡ್ ರದ್ದತಿಯ ಸುಪ್ರೀಂ ತೀರ್ಪು ಕಾಂಗ್ರೆಸ್ ನಿಲುವನ್ನು ಎತ್ತಿಹಿಡಿದಿದೆ: ಸುರ್ಜೇವಾಲ