ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಶಿವರಾತ್ರಿ ದೇಶಿಕೇಂದ್ರದ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಅಭ್ಯರ್ಥಿ ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್ ಅವರು ಕೆಲಕಾಲ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ. ಲಕ್ಷ್ಮಣ್ ಅವರು, ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಮಹಾರಾಜರ ದತ್ತು ಪುತ್ರ ಹಾಗೂ ಜನಸಾಮಾನ್ಯರ ನಡುವಿನ ಸ್ಪರ್ಧೆ ಇದು ಎಂದು ಹೇಳಿದರು.
''ನಾವು ಅಭಿವೃದ್ಧಿ ಪರ, ಬಿಜೆಪಿಯವರು ಅಭಿವೃದ್ಧಿ ವಿರುದ್ಧ, ಕೋಮು ಸೌಹಾರ್ದದಲ್ಲಿ ನಾವು ನಂಬರ್ ಒನ್ ಅವರು ಶೂನ್ಯ. ನಾವು ಸಂವಿಧಾನದ ಪರ ಅವರು ವಿರುದ್ಧ ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ. ಕಳೆದ ಹತ್ತು ತಿಂಗಳಿನಲ್ಲಿ ಸಿಎಂ ಸಿದ್ದರಾಮಯ್ಯನವರು ತವರು ಜಿಲ್ಲೆ ಮೈಸೂರಿಗೆ ಒಂದೂವರೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಮತಯಾಚಿಸುತ್ತೇವೆ'' ಎಂದು ತಿಳಿಸಿದರು.
''ಕಳೆದ 10 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರದ ಕೊಡುಗೆ ಏನೇನೂ ಇಲ್ಲ. ಹೀಗಾಗಿ ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ಕೂಡ ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು. ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಹಣ ಕೇಂದ್ರಕ್ಕೆ ಹೋಗುತ್ತಿದೆ. ಅದರೆ ನಮಗೆ ಬರಬೇಕಾದ ಪಾಲನ್ನು ಅವರು ನೀಡುತ್ತಿಲ್ಲ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ'' ಎಂದರು.
''ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕೇಂದ್ರದಿಂದ ತಂಡ ಕೂಡ ಬಂದು ವರದಿ ನೀಡಿದೆ. ಆದರೆ, ಇದುವರೆಗೆ ನಯಾಪೈಸೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಹೀಗಾಗಿ ರಾಜ್ಯಸರ್ಕಾರ ನ್ಯಾಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ'' ಎಂದು ತಮ್ಮ ಸರ್ಕಾರದ ನಡೆಯನ್ನು ಲಕ್ಷ್ಮಣ್ ಸಮರ್ಥಿಸಿಕೊಂಡರು.
ಇದನ್ನೂಓದಿ:ಚಿಕ್ಕಮಗಳೂರು: ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ - BASAVARAJ BOMMAI