ಹುಬ್ಬಳ್ಳಿ : ಯುವಕನ ಬರ್ಬರ ಹತ್ಯೆ ಮಾಡಿ ಸುಟ್ಟ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತನ ಆಪ್ತ ಸ್ನೇಹಿತ ಮಂಟೂರ ರಸ್ತೆಯ ಮಿಲ್ಲತ್ ನಗರದ ನಿವಾಸಿ ಸೈಯದ್ ಅಜರ್ (25) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಅಜರ್ ಮತ್ತು ಮೃತ ವಿಜಯ ಬಸವ ಆಪ್ತ ಗೆಳೆಯರಾಗಿದ್ದರು. ಆದರೆ, ಮೃತ ವಿಜಯ ಬಸವ, ಅಜರ್ ಹೆಂಡತಿಗೆ ಕಿರಿಕಿರಿ ಮಾಡುತ್ತಿದ್ದ. ದೂರವಾಣಿ ಕರೆ ಮಾಡಿ ಬೇರೆ ಬೇರೆ ಸಂದರ್ಭದಲ್ಲಿ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಗೆಳೆಯನಿಗೆ ಅಜರ್ ಬುದ್ಧಿವಾದವನ್ನೂ ಕೂಡಾ ಹೇಳಿದ್ದ. ಆದರೂ ಆತನ ಮಾತು ಕೇಳದಿದ್ದಾಗ ಕೊಲೆ ಯೋಜನೆ ರೂಪಿಸಿದ್ದಾನೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇದನ್ನ ಇಲ್ಲಿಗೆ ಬಿಟ್ಟುಬಿಡು ಎಂದು ಕೇಳಿಕೊಂಡಿದ್ದ. ಗೆಳೆಯನ ಸಲಹೆಯನ್ನು ವಿಜಯ ಬಸವ ಒಪ್ಪಲಿಲ್ಲ. ಇದರಿಂದ ಕುಪಿತಗೊಂಡು ಕಲ್ಲು ಎತ್ತಿ ಹಾಕಿ ನಂತರ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಬಂಧಿಸಿದ್ದೇವೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ. ಅಜರ್ ಒಬ್ಬನೇ ಕೊಲೆ ಮಾಡಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದ ಪೊಲೀಸ್ ಆಯುಕ್ತೆ: ಕೊಲೆಯಾದ ಯುವಕನನ್ನು ಮಾರುತಿನಗರದ ನಿವಾಸಿ ವಿಜಯ ಬಸವ (25) ಎಂದು ಗುರುತಿಸಲಾಗಿತ್ತು. ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ (ಜನವರಿ -31-23) ನಡೆಸಿದ್ದರು.
ಬಳಿಕ ಪ್ರತಿಕ್ರಿಯಿಸಿದ್ದ ಅವರು, "ಕೊಲೆಯಾದ ಯುವಕ ವಿಜಯ ಬಸವ ಎಂದು ತಿಳಿದು ಬಂದಿದೆ. ಮೊಬೈಲ್ ಸರ್ವಿಸ್ ಕಂಪನಿಯ ಟೀಮ್ ಹೆಡ್ ಆಗಿ ಕೆಲಸ ಮಾಡುತ್ತಿದ್ದ. ಆತನ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಲಾಗಿದೆ. ತನಿಖೆಯ ನಂತರ ಕಾರಣ ತಿಳಿದು ಬರಲಿದೆ" ಎಂದು ತಿಳಿಸಿದ್ದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ : ಮೃತ ಯುವಕನ ಸಹೋದರ ವಿಶಾಲ ಬಸವ ಹಾಗೂ ಸ್ನೇಹಿತ ರಘು ಮಾಧ್ಯಮದವರೊಂದಿಗೆ ಮಾತನಾಡಿದ್ದು, ''ವಿಜಯ ಸ್ನೇಹ ಜೀವಿಯಾಗಿದ್ದ. ಈ ಕೊಲೆ ಯಾರು ಮಾಡಿದ್ದಾರೆ. ಯಾಕೆ ಮಾಡಿದ್ದಾರೆ? ಎಂಬ ಬಗ್ಗೆ ಮಾಹಿತಿ ಇಲ್ಲ. ಆತ ಮನೆಯಲ್ಲಿ ಹಾಗೂ ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಕೊಲೆಗೆ ಹಣಕಾಸು ಹಾಗೂ ಪ್ರೀತಿ ಪ್ರೇಮವೂ ಕಾರಣ ಅಲ್ಲ. ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು'' ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ : ಹುಬ್ಬಳ್ಳಿ: ಯುವಕನ ಬರ್ಬರ ಹತ್ಯೆ, ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ