ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದ ತಿಕ್ಕಾಟ ಪ್ರಾರಂಭವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದ ವಿನೋಬನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅಧಿಕಾರದ ತಿಕ್ಕಾಟವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಇವರು ಸಿಎಂ ಹಾಗೂ ಡಿಸಿಎಂ ಖುರ್ಚಿಯ ಚರ್ಚೆಯನ್ನು ಗಮನಿಸುತ್ತಿದ್ದಾರೆ ಎಂದರು.
ಬೆಲೆ ಏರಿಕೆ ವಿಚಾರ: ಒಂದು ವರ್ಷ ತುಂಬಿದ ಮೇಲೆ ಮತದಾರರ ವಿರುದ್ಧ ಸೇಡು ತೀರಿಸಿಕೊಳ್ಳುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಹಾಲಿನ ದರ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗಿದೆ. ಜನರ ಜೇಬಿಗೆ ಕೈ ಹಾಕಿ ಹಣ ಕಿತ್ತುಕೊಳ್ಳುವ ಕೆಲಸ ಆಗಿದೆ ಎಂದು ಸಂಸದ ವಾಗ್ದಾಳಿ ನಡೆಸಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು: ಹಾವೇರಿಯಲ್ಲಿ ನಡೆದ ಭೀಕರ ಅಪಘಾತ ದುಃಖ ತಂದಿದೆ. ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ಸಾವನಪ್ಪಿದ್ದಾರೆ. ಸರ್ಕಾರ ಈಗಾಗಲೇ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇನ್ನು ಹೆಚ್ಚಿನ ಪರಿಹಾರ ನೀಡಬೇಕು. ಕನಿಷ್ಠ ಒಬ್ಬರಿಗೆ 5 ಲಕ್ಷ ಪರಿಹಾರ ನೀಡಬೇಕು. ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಲು ಪಕ್ಷದಿಂದಲೂ ಪ್ರಯತ್ನ ಮಾಡುತ್ತೇವೆ ಎಂದರು.
ಎಲ್ಲ ಜನಪ್ರತಿನಿಧಿಗಳು ಸೇರಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬುತ್ತೇವೆ. ಇನ್ನು ಒಂದು ಗಂಟೆಯಲ್ಲಿ ಎಲ್ಲರೂ ಮನೆ ಸೇರುತ್ತಿದ್ದರು. ಅಷ್ಟರಲ್ಲಿ ಹೀಗೆ ಆಗಿದೆ. ದೇವರ ಇಚ್ಛೆ ಇತ್ತೋ ಏನು ಗೊತ್ತಿಲ್ಲ. ವಾಹನ ಸವಾರರು ಇನ್ನಾದರೂ ಎಚ್ಚರಿಕೆಯಿಂದ ಇರಬೇಕು ಎಂದರು.
ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಚುನಾವಣೆ: ಸಹಕಾರಿ ಪ್ರಕೋಷ್ಟದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅವರು ಸಾಕಷ್ಟು ವರ್ಷದಿಂದ ಅಧಿಕಾರಿದಲ್ಲಿದ್ದಾರೆ. ಅವರ ಪಕ್ಷವೇ ರಾಜ್ಯದಲ್ಲಿ ಅಧಿಕಾರಿದಲ್ಲಿದೆ. ಹಾಗಾಗಿ ಅವರು ಸಹಕಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 51 ಅವರು ಗೆದ್ದಿದ್ದಾರೆ, ನಾವು 49 ಗೆದ್ದಿದ್ದೇವೆ. ಎಲ್ಲ ರೀತಿಯ ಪ್ರಯತ್ನ ಹಾಗೂ ಶಕ್ತಿ ಮೀರಿ ನಮ್ಮ ಪಕ್ಷದ ಅಭ್ಯರ್ಥಿಗಳು ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಹತ್ತಿರದಿಂದ ಸೋತಿದೆ ಅಷ್ಟೇ. ಬಿಜೆಪಿ ಅಭ್ಯರ್ಥಿ ಗಳು ತುಂಬಾ ಫೈಟ್ ನೀಡಿದ್ದಾರೆ ಎಂದರು.
ಓದಿ: ಸಿಎಂ ಬದಲಾವಣೆ ಚರ್ಚೆ ತರಕಾರಿ ಮಾರುಕಟ್ಟೆ ಸಂತೆಯಲ್ಲ: ಆರ್.ವಿ.ದೇಶಪಾಂಡೆ ಅಸಮಾಧಾನ - RV Deshpande Upset