ಬೆಂಗಳೂರು: ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆತನ ಸ್ನೇಹಿತನ ಮೂಲಕ ಸರಗಳ್ಳತನ ಮಾಡಿಸುತ್ತಿದ್ದ ಮಹಿಳೆಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ಮೂಲದ ರೋಜಾ (32) ಬಂಧಿತೆ. ಈಕೆಯಿಂದ 5 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದು ಬಾಲಮಂದಿರದ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, ಕಳೆದ ತಿಂಗಳು 15ರಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿತ್ತು. ನಿರ್ಮಲಾ ಎಂಬ ಮಹಿಳೆಯ 45 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಾಯಿ ಮತ್ತು ಮಗ ಸೇರಿ ಕೃತ್ಯ ಎಸಗಿರುವುದು ಕಂಡುಬಂತು. ಈ ಸಂಬಂಧ ಚಿಂತಾಮಣಿ ಮೂಲದ ರೋಜಾ ಎಂಬ ಆರೋಪಿತೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿಯನ್ನು ವಿಚಾರಣೆ ನಡೆಸಿದಾಗ, ಆಕೆಯ ಅಪ್ರಾಪ್ತ ಮಗ ಮತ್ತು ಆತನ ಅಪ್ರಾಪ್ತ ಸ್ನೇಹಿತ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು ಎಂಬ ವಿಷಯ ತಿಳಿದು ಬಂದಿದೆ. ರಾಮನಗರ, ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ಇತರೆಡೆ ಸರಗಳ್ಳತನ ಮಾಡಿರುವುದು ಕಂಡು ಬಂದಿದೆ. ತಾಯಿ ಮತ್ತು ಮಗ ಹಾಗೂ ಆತನ ಸ್ನೇಹಿತ ಚಿಂತಾಮಣಿಯಲ್ಲಿ ವಾಸವಾಗಿರುತ್ತಾರೆ. ಬೆಳಗ್ಗೆ ಮೂರು ಗಂಟೆಗೆ ಬೆಂಗಳೂರಿಗೆ ಬಂದು, ಬೆಂಗಳೂರು ಹೊರ ವಲಯದ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಎರಡು ಗಂಟೆ ವಿಶ್ರಾಂತಿ ಪಡೆದು ಬಳಿಕ ತಾಯಿ, ಮೊದಲು ಮಹಿಳೆಯರು ಯಾವ ರಸ್ತೆಯಲ್ಲಿ ಹೆಚ್ಚಾಗಿ ಓಡಾಡುತ್ತಾರೆ ಎಂಬ ಮಾಹಿತಿಯನ್ನು ಮಗನಿಗೆ ಕೊಡುತ್ತಿದ್ದಳು. ನಂತರ ಮಗ ಮತ್ತು ಆತನ ಸ್ನೇಹಿತ ಬೈಕ್ನಲ್ಲಿ ತೆರಳಿ ಸರಗಳ್ಳತನ ಮಾಡುತ್ತಿದ್ದರು ಎಂದು ವಿವರಿಸಿದರು.
ಕೃತ್ಯವೆಸಗಿದ ಬಳಿಕ ಚಿನ್ನಾಭರಣವನ್ನು ರೋಜಾಗೆ ನೀಡುತ್ತಿದ್ದರು. ರೋಜಾ ಇವುಗಳನ್ನು ಗಿರವಿ ಇಟ್ಟು ಹಣ ಪಡೆಯುತ್ತಿದ್ದಳು. ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರು ಬ್ಯಾಡರಹಳ್ಳಿ, ಕೆಂಗೇರಿ, ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಸರಗಳ್ಳತನ, ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಪಶ್ಚಿಮ ವಿಭಾಗದ ಅನ್ನಪೂರ್ಣೇಶ್ವರಿ ನಗರ, ಆರ್.ಆರ್. ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಸರಗಳ್ಳತನ ಪ್ರಕರಣಗಳನ್ನ ಭೇದಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.