ಶಿವಮೊಗ್ಗ: 17 ವರ್ಷದ ಬಾಲಕನಿಗೆ ವಾಹನ ಚಾಲನ ಪರವಾನಗಿ ಇಲ್ಲದೇ ದ್ವಿಚಕ್ರ ವಾಹನ ನೀಡಿದ್ದ ತಾಯಿಗೆ ಶಿವಮೊಗ್ಗ ನ್ಯಾಯಾಲಯ 30 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಪಿಎಂ ರಸ್ತೆ ಬಳಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಬಾಲಕನನ್ನು ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ, ಆತ ಅಪ್ರಾಪ್ತನಾಗಿರುವುದು ಮತ್ತು ಚಲಾಯಿಸುತ್ತಿದ್ದ ಬೈಕ್ ಆತನ ತಾಯಿಯದು ಎಂದು ತಿಳಿದು ಬಂದಿತ್ತು.
ಹೀಗಾಗಿ ಪೂರ್ವ ಸಂಚಾರಿ ಪೊಲೀಸರು, ಸಂಚಾರಿ ನಿಯಮ ಉಲ್ಲಂಘನೆ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ವಾಹನ ಮಾಲೀಕರಾದ ಆತನ ತಾಯಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು. ಈ ಕುರಿತು ಶಿವಮೊಗ್ಗ 3 ನೇ ಎ ಸಿ ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಬೈಕ್ ಮಾಲೀಕರಿಗೆ ದಂಡವನ್ನು ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ : ಲೈಸನ್ಸ್ ಪಡೆಯದೆ ಶಾಲೆಗೆ ಬೈಕ್ ಸವಾರಿ: 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರಿಗೆ ದಂಡ
ಬೈಕ್ ನೀಡದಂತೆ ಪೋಷಕರಿಗೆ ತಾಕೀತು: ಬೆಂಗಳೂರಲ್ಲಿಯೂ ಡ್ರೈವಿಂಗ್ ಲೈಸನ್ಸ್ ಹೊಂದದೆ ಹಾಗೂ 18 ವರ್ಷವಾಗದ ವಿದ್ಯಾರ್ಥಿಗಳು ಬೈಕ್ ಚಲಾಯಿಸುವ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇತ್ತೀಚೆಗೆ, ವಿಶೇಷ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳ ಪೋಷಕರಿಗೆ ದಂಡ ವಿಧಿಸಿ, ಬೈಕ್ ನೀಡದಂತೆ ಎಚ್ಚರಿಕೆ ನೀಡಿದ್ದರು.
ರಾಜ್ಯ ರಾಜಧಾನಿಯಲ್ಲಿ 1,500ಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಮಕ್ಕಳು ಶಾಲಾ-ಕಾಲೇಜುಗಳಿಗೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ಇದರಿಂದ ಟ್ರಾಫಿಕ್ ಪೊಲೀಸರು ಎಚ್ಚೆತ್ತುಕೊಂಡು ನಗರದ 150ಕ್ಕೂ ಹೆಚ್ಚು ಕಾಲೇಜುಗಳಿಗೆ ತೆರಳಿ ತಪಾಸಣೆ ನಡೆಸಿದ್ದರು.
''ಘಟನೆಗಳು ಮರುಕಳಿಸಿದರೆ ಪ್ರಕರಣ ದಾಖಲಿಸುವುದಾಗಿಯೂ ಪೊಲೀಸರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಶಾಲೆಗಳಿಂದ ಸರ್ಕ್ಯುಲೇಷನ್ ಹೊರಡಿಸಲು ಸೂಚಿಸಲಾಗಿದೆ'' ಎಂದು ಬೆಂಗಳೂರು ದಕ್ಷಿಣ ವಿಭಾಗ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದರು.