ಬೆಂಗಳೂರು: ಕಳೆದ ವಾರ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 1.34 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರು ಮತ್ತು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿತ್ತು. ಕೋಟ್ಯಂತರ ರೂಪಾಯಿ ಪತ್ತೆಯಾದ ಕುರಿತು ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದ್ವಿಚಕ್ರ ವಾಹನ ಮಾಲೀಕ ಧನಂಜಯ್ ಹಾಗೂ ಕಾರು ಮಾಲೀಕ ಸೋಮಶೇಖರ್ ಎಂಬವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ಹಿನ್ನೆಲೆ: ಏ.13ರಂದು ಜಯನಗರ 4ನೇ ಹಂತದ ಬಳಿ ಹಣ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚುನಾವಣಾ ಪ್ಲೈಯಿಂಗ್ ಸ್ವ್ಕಾಡ್ ದಾಳಿ ನಡೆಸಿತ್ತು. ಆರೋಪಿತರು ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದರು. ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಮೂರು ಬ್ಯಾಗ್ಗಳಲ್ಲಿ ಹಣ, ಒಂದು ಮೊಬೈಲ್ ಹಾಗೂ ಕೆಲವು ದಾಖಲಾತಿಗಳು ದೊರೆತಿದ್ದವು.
ಚುನಾವಣಾ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದಿದ್ದ ಜಯನಗರ ಪೊಲೀಸರು ಕೂಡಾ ಪರಿಶೀಲನೆ ನಡೆಸಿದ್ದರು. ಐಟಿ ಅಧಿಕಾರಿಗಳು 1.34 ಕೋಟಿ ಹಣ, ದಾಖಲಾತಿ ಪತ್ರಗಳು ಹಾಗೂ ಒಂದು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಹಣದ ಮೂಲದ ಬಗ್ಗೆ ತನಿಖೆ ಕೈಗೊಂಡು ಧನಂಜಯ್ ಹಾಗೂ ಸೋಮಶೇಖರ್ ಅವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಕಾರಿನಲ್ಲಿ ಸಿಕ್ಕ ಹಣ ಗುತ್ತಿಗೆದಾರರೊಬ್ಬರಿಗೆ ಸೇರಿದೆ ಎನ್ನಲಾಗುತ್ತಿದೆ. ಸೂಕ್ತ ಪುರಾವೆಯಿಲ್ಲದೆ ಹಣ ಸಾಗಾಟ ಮಾಡುತ್ತಿರುವ ಅನುಮಾನ ವ್ಯಕ್ತವಾಗಿದೆ. ವ್ಯಾವಹಾರಿಕ ದೃಷ್ಟಿಯಿಂದ ಹಣ ಸಾಗಾಟ ಮಾಡುತ್ತಿದ್ದರಾ? ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಸಂಬಂಧಿಸಿದ ಹಣ ಎಂಬುದರ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಯನಗರದ ಕಾರಲ್ಲಿ ಕೋಟಿ ಹಣ ಪತ್ತೆ ಪ್ರಕರಣ: ಪೊಲೀಸರಿಂದ ಮಹತ್ವದ ಮಾಹಿತಿ ಕಲೆ - Money seize case