ಚಿಕ್ಕಮಗಳೂರು: ದೇಶದೆಲ್ಲೆಡೆ ಇಂದು ಸಂಭ್ರದಿಂದ ಗಣೇಶ ಚೌತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಂತೆ ನಗರದ ಹನುಮಂತಪ್ಪ ವೃತ್ತದಲ್ಲಿರುವ ಹಿಂದೂ ಮಹಾಸಭಾ ಗಣಪತಿಯನ್ನು ಸಡಗರದಿಂದ ಬರಮಾಡಿಕೊಂಡಿದ್ದು, ಮೆರವಣಿಗೆ ವೇಳೆ ಗಣಪತಿಯ ಮುಂಭಾಗದಲ್ಲಿ ಡ್ರಮ್ ಸೆಟ್ ಶಬ್ಧಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಸಿ.ಟಿ.ರವಿ ಜೊತೆ ಯುವಕರು ಕುಣಿದು ಸಂಭ್ರಮಿಸಿದರು. ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ತುಂಬಾ ಅದ್ಧೂರಿಯಾಗಿ ನಡೆಯಿತು.
ವಿಭಿನ್ನ ಆಕರ್ಷಕ ಗಣಪನ ಮೂರ್ತಿಗಳು: ನಾಡಿನೆಲ್ಲೆಡೆ ವಿಘ್ನ ನಿವಾರಕನ ಹಬ್ಬದ ಸಂಭ್ರಮ ಮನೆ ಮಾಡಿದೆ. ಕಾಫಿ ನಾಡು ಚಿಕ್ಕಮಗಳೂರಿನಲ್ಲಿಯೂ ಅದ್ಧೂರಿಯಾಗಿ ಗಣೇಶೋತ್ಸವ ನಡೆಯುತ್ತಿದೆ. ಗಣೇಶೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಬಣ್ಣ ಬಣ್ಣದ ಗಣಪನ ಮೂರ್ತಿಗಳು. ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ವಿವಿಧ ರೀತಿಯ ಆಕರ್ಷಕ ಗಣಪನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ.
ಎನ್.ಆರ್.ಪುರ ತಾಲೂಕಿನ ತಂಗಲು ಮನೆ ಗ್ರಾಮದ ಪ್ರಸಾದ್ ಆಚಾರ್ಯ ಕುಟುಂಬ ವಂಶಪಾರಂಪರ್ಯವಾಗಿ ಆಕರ್ಷಕ ಗಣೇಶನ ಮೂರ್ತಿಗಳನ್ನು ತಯಾರಿಸಿಕೊಂಡು ಬರುತ್ತಿದೆ. ಇವರ ಮೂರ್ತಿಗಳಿಗೆ ಮಲೆನಾಡು ಭಾಗದಲ್ಲಿ ಭಾರಿ ಬೇಡಿಕೆ ಇದ್ದು, ಈ ಬಾರಿ ವಿವಿಧ ಬಗೆಯ 50ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಮಾಡಿದ್ದಾರೆ. ಈ ಕಲೆಯನ್ನು ತಮ್ಮ ಮಕ್ಕಳಿಗೂ ಹೇಳಿಕೊಟ್ಟಿದ್ದು, ಕುಟುಂಬದವರೆಲ್ಲರೂ ಸೇರಿ ಯಾವುದೇ ರೀತಿಯ ಗಣಪತಿ ಬೇಕಿದ್ದರೂ ತಯಾರಿಸಿ ಕೊಡುತ್ತಾರೆ.
ಇದನ್ನೂ ಓದಿ: 12 ಲಕ್ಷ ಮೌಲ್ಯದ ವಜ್ರ, ನವರತ್ನಾಲಂಕಾರದ ಗಣಪನ ಪ್ರತಿಷ್ಠಾಪಿಸಿದ ಸ್ವಸ್ತಿಕ್ ಯುವಕರ ಸಂಘ - Navaratna decoration Ganapana