ಬೆಂಗಳೂರು: "ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಲಾಠಿಚಾರ್ಜ್ ಮಾಡಿಸಿ ಅಮಾನವೀಯವಾಗಿ ವರ್ತಿಸಿದೆ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ದೂರಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿನ್ನೆ ನಡೆದ ಲಾಠಿಚಾರ್ಜ್ ಸಂಬಂಧ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು" ಎಂದು ಒತ್ತಾಯಿಸಿದರು.
"ಬೆಳಗಾವಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆಗ ನಡೆಸಿದ ಲಾಠಿಚಾರ್ಜ್‍ನಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಲಿಂಗಾಯತ ಸಮುದಾಯಕ್ಕೆ ಸೇರಿದ ಪಂಚಮಸಾಲಿ ರೈತರು ಗಾಯಗೊಂಡಿದ್ದಾರೆ. ಸರ್ಕಾರದ್ದು ಸರ್ವಾಧಿಕಾರಿ ನಡೆ, ಪ್ರಜಾಪ್ರಭುತ್ವ ವಿರೋಧಿ ನಡೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪಂಚಮಸಾಲಿ ಸಮುದಾಯದ ಬೇಡಿಕೆ ಇವತ್ತು ನಿನ್ನೆಯದಲ್ಲ, 2ಎ ಮೀಸಲಾತಿ ಸಂಬಂಧ ಈ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲ್ಲೂ ಬೇಡಿಕೆಗಳನ್ನು ಪುನರುಚ್ಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ 2ಸಿ, 2ಡಿ ಅಡಿ ಎರಡು ರೀತಿ ಮೀಸಲಾತಿ ಕೊಟ್ಟು, ಅದರಡಿಯಲ್ಲಿ ವಿವಿಧ ಸಮುದಾಯಗಳನ್ನು ಒಟ್ಟು ಸೇರಿಸಿ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿತ್ತು" ಎಂದರು.
"2ಸಿಗೆ ಶೇ.4 ಮೀಸಲಾತಿ ಇದ್ದುದನ್ನು, ಶೇ.6 ಮಾಡಿದ್ದು, 2ಡಿ ಅಡಿ ಶೇ.5 ಇದ್ದುದನ್ನು ಶೇ.7 ಮಾಡಿದ್ದರು. ಪಂಚಮಸಾಲಿಗಳನ್ನೂ 2ಡಿ ವ್ಯಾಪ್ತಿಯೊಳಗಡೆ ತರುವ ಕೆಲಸ ಮಾಡಲಾಗಿತ್ತು. ಅದನ್ನು ಈ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಿಲ್ಲ. 2ಎ ಮೀಸಲಾತಿ ಬಗ್ಗೆಯೂ ಸರಿಯಾಗಿ ಸ್ಪಂದಿಸಿಲ್ಲ. ಈ ಮೂಲಕ ಹೋರಾಟಕ್ಕಿಳಿಯುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದ್ದೇ ಆಳುವ ಕಾಂಗ್ರೆಸ್ ಸರ್ಕಾರ" ಎಂದು ಟೀಕಿಸಿದರು.
"ಕಾಂಗ್ರೆಸ್ಸಿಗರು ವಿಪಕ್ಷದಲ್ಲಿದ್ದಾಗ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂಬಂಧಿಸಿ ಮೊಸಳೆ ಕಣ್ಣೀರು ಸುರಿಸಿದ್ದರು. ಇವರ ಪಕ್ಷದ ಮುಖಂಡರು ರಾಜೀನಾಮೆ ಕೊಡುವ ಮಾತನಾಡಿದ್ದರು. ಲಾಠಿಚಾರ್ಜ್ ಆಗಿದೆ, ಸ್ವಾಮೀಜಿಗಳನ್ನು ಬಂಧಿಸಿದ್ದೀರಿ. ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ರಾಜೀನಾಮೆ ಕೊಡುವವರೆಲ್ಲ ಎಲ್ಲಿ ಬಿಲ ಸೇರಿಕೊಂಡಿದ್ದೀರಿ?" ಎಂದು ಪ್ರಶ್ನಿಸಿದರು.
ಮತ್ತೊಂದೆಡೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ನಿನ್ನೆ ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಹಿಂಸಾಚಾರ ಆಗಿರುವುದಕ್ಕೆ ಅಲ್ಲಿಯ ಅಧಿಕಾರಿಗಳ ದಾಷ್ಟ್ಯ, ದುರ್ನಡತೆ ಮತ್ತು ದರ್ಪ ಕಾರಣ. ಮುಖ್ಯಮಂತ್ರಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಮತ್ತು ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು ಕೇಳಲು ಸ್ವತಂತ್ರರು ಅನ್ನುವ ಬಗ್ಗೆ ಅವರಿಗೆ ನಂಬಿಕೆ ಇದ್ದರೆ, ಕೂಡಲೇ ಲಾಠಿಚಾರ್ಜ್ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಮತ್ತು ಹಿರಿಯರನ್ನು ಮಾತುಕತೆಗೆ ಕರೆಯಿಸಿ ಸೌಹಾರ್ದತೆಯಿಂದ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ಪಂಚಮಸಾಲಿಗರಿಗೆ 2ಎ ಮೀಸಲಾತಿ ನೀಡಬಾರದು': ಸಿಎಂಗೆ ಹಿಂದುಳಿದ ಜಾತಿಗಳ ಒಕ್ಕೂಟದ ಮನವಿ