ಮಂಗಳೂರು: ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ನಗರದ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನ ಕೊರಗಜ್ಜನ ಕಟ್ಟೆಯಲ್ಲಿ ಶನಿವಾರ ರಾತ್ರಿ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆ ಸಲ್ಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊದಿಗೆ ಮಾತನಾಡಿದ ಅವರು, "ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ನಾಯಕರು ಹಾಗೂ ಮಂಗಳೂರಿನ ಸ್ನೇಹಿತರು ಕೋಲ ಸೇವೆಯ ಬಗ್ಗೆ ಹೇಳಿದ್ದರು. ಈಗ ಕುಟುಂಬಸಮೇತರಾಗಿ ಬಂದು ಸೇವೆಯಲ್ಲಿ ಭಾಗಿಯಾದೆ" ಎಂದರು.
48 ದಿನದೊಳಗೆ ಸಮಸ್ಯೆ ಪರಿಹರಿಸುವ ಅಭಯ: ದೈವದ ಬಳಿ ಸಂಕಷ್ಟ ಹೇಳಿಕೊಂಡ ಶಾಸಕ ವಿನಯ ಕುಲಕರ್ಣಿಗೆ, 48 ದಿನಗಳೊಳಗೆ ಕ್ಷೇತ್ರ ನಿರ್ಬಂಧ ಸಮಸ್ಯೆ ಬಗೆಹರಿಸುವ ಬಗ್ಗೆ ದೈವ ಅಭಯ ನೀಡಿದೆ. ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಬಗ್ಗೆ ಕುಲಕರ್ಣಿ ಪ್ರಸ್ತಾಪಿಸಿದರು. ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆಯೂ ಹೇಳಿಕೊಂಡರು. ಸಂಕಷ್ಟ ನಿವಾರಿಸುವ ಬಗ್ಗೆ ಕೊರಗಜ್ಜ ದೈವ ಅಭಯ ನೀಡಿದ್ದು "ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಮುಂದುವರಿಯುವುದು ಉತ್ತಮ ಗುಣ" ಎಂದು ಹೇಳಿತು.
'ಅಧರ್ಮದಲ್ಲಿ ಹೋದವರನ್ನು ನೋಡಿಕೊಳ್ಳುತ್ತೇನೆ': ಇದೇ ವೇಳೆ, ಇನ್ನೂ ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿರುವಂತೆಯೂ ಸೂಚನೆ ನೀಡಿತು. ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಮುಂದೆ ಸಂತೋಷದಿಂದ ಕ್ಷೇತ್ರಕ್ಕೆ ಬಂದು ಕೋಲ ಸೇವೆ ನೀಡುವಂತೆ ದೈವ ನುಡಿಯಿತು.
ಇದನ್ನೂ ಓದಿ: ಕೊರಗಜ್ಜನ ಕೋಲದಲ್ಲಿ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆಎಲ್ ರಾಹುಲ್ ಭಾಗಿ - Koragajja kola