ರಾಯಚೂರು: "ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಸ್ವಾಮೀಜಿ ತಿಳುವಳಿಕೆ ಇದ್ದು ಮಾತನಾಡಿದ್ದಾರೋ, ಇಲ್ಲದೆ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ" ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
"ನಾಡಪ್ರಭು ಕೆಂಪೇಗೌಡ ದಿನಾಚರಣೆಯಂದು ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ, ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಸ್ವಾಮೀಜಿ ಯಾಕೆ ರಾಜಕೀಯ ಮಾತನಾಡಿದರೋ ಗೊತ್ತಿಲ್ಲ, ಅದು ಸರಿಯಲ್ಲ" ಎಂದರು.
ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, "ನಮ್ಮ ಪಕ್ಷದಲ್ಲಿ ನೀತಿ-ನಿಯಮವಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬುದೂ ಇದೆ. ಡಿ.ಕೆ.ಶಿವಕುಮಾರ್ಗೆ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ಇದೆ" ಎಂದು ತಿಳಿಸಿದರು.
ಹೆಚ್ಚುವರಿ ಮೂರು ಡಿಸಿಎಂ ಸ್ಥಾನಗಳ ಸೃಷ್ಟಿ ಕುರಿತ ಪ್ರಶ್ನೆಗೆ, "ಇದರ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ" ಎಂದಷ್ಟೇ ಹೇಳಿದರು.
ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ: ಸಚಿವರು ಕಲಬುರಗಿ ವಿಭಾಗ ವ್ಯಾಪ್ತಿಯ ಬೀದರ್, ಕೊಪ್ಪಳ, ವಿಜಯನಗರ, ಬಳ್ಳಾರಿ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ನಡೆಸಿದರು. ಇಲಾಖೆಯ ಪ್ರಗತಿ ಕಾಮಗಾರಿಗಳು ಹಾಗೂ ರೈತರಿಗೆ ನೀಡುವ ಸೌಲಭ್ಯಗಳು, ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಬೇಕು ಅನ್ನೋರು ಹೈಕಮಾಂಡ್ ಬಳಿ ಮಾತನಾಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ - ADDITIONAL DCM ISSUE