ಚಿಕ್ಕೋಡಿ : ಚುನಾವಣೆ ಬಂದಾಗ ರಾಜಕೀಯ ನಾಯಕರು ಪಕ್ಷಾಂತರ ಮಾಡುವುದು ಸಹಜ. ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆಯಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರಿಗೆ ಒಳ್ಳೆದಾಗಲಿ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.
ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗೋನಳ್ಳಿ ಗ್ರಾಮದಲ್ಲಿ ಜೈನ ಸಮುದಾಯದ ಪಂಚ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಗದೀಶ್ ಶೆಟ್ಟರ್ ಎಲ್ಲಿ ಇರಬೇಕು ಎಂಬುವುದು ಅವರ ವೈಯಕ್ತಿಕ ತೀರ್ಮಾನ. ಬಿಜೆಪಿ ಪಕ್ಷಕ್ಕೆ ಮರಳಿದ್ದಾರೆ ಅವರಿಗೆ ಒಳ್ಳೆದಾಗಲಿ. ಒಬ್ಬರು ಹೋಗಿದ್ದಾರೆ ಅವರಿಗೆ ಒಳ್ಳೆದಾಗಲಿ. ಇವರು ಕಾಂಗ್ರೆಸ್ ಬಿಡುವುದರಿಂದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ ಇಲ್ಲ. ಏನೇ ಇದ್ದರೂ ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ. ಒಂದು ಕಡೆ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಎಲ್ಲ ಹಂತದಲ್ಲಿ ಕೆಲಸ ಮಾಡುತ್ತಿದ್ದೇವೆ. ಅಭ್ಯರ್ಥಿಗಳ ಬಗ್ಗೆ ಸರ್ವೆ ಆಗುತ್ತದೆ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನ ಕಾದು ನೋಡೋಣ ಎಂದು ಹೇಳಿದ್ದಾರೆ. ಕಾಂತರಾಜು ವರದಿ ಬಿಡುಗಡೆ ವಿಳಂಬ ವಿಚಾರವಾಗಿ ಮಾತನಾಡಿ, ಜನಗಣತಿ ವರದಿ ಬಿಡುಗಡೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದಷ್ಟು ಬೇಗನೆ ಬಿಡುಗಡೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಘರ್ ವಾಪ್ಸಿ- ಆರಗ ಜ್ಞಾನೇಂದ್ರ ಸ್ವಾಗತ - ಶಿವಮೊಗ್ಗ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಬಿಜೆಪಿಯ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರು ಸ್ವಾಗತ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿರುವ ಅವರು, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.
ಸಂತೋಷದಿಂದ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ: ನನಗೆ ಅನ್ನಿಸಿತ್ತು, ಜಗದೀಶ್ ಶೆಟ್ಟರ್ ಅವರಂತವರಿಗೆ ಕಾಂಗ್ರೆಸ್ ಸಂಸ್ಕೃತಿ ಆಗುವುದಿಲ್ಲ ಎಂದು. ಜಗದೀಶ್ ಶೆಟ್ಟರ್ ಅವರು ಮೊದಲಿನಿಂದಲೂ ಆರ್ಎಸ್ಎಸ್ ಹಾಗೂ ಬಿಜೆಪಿಯಲ್ಲಿದ್ದವರು. ಅವರಿಗೆ ಪಕ್ಷದಲ್ಲಿ ಎಲ್ಲಾ ಗೌರವಗಳು ಸಿಕ್ಕಿವೆ. ಕಳೆದ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸದಿಂದ ಅವರು ಪಕ್ಷ ಬಿಡುವ ಸಂದರ್ಭ ಎದುರಾಗಿತ್ತು. ಇಂದು ಜಗದೀಶ್ ಶೆಟ್ಟರ್ ಬಹಳ ಸಂತೋಷದಿಂದ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಅನುಕೂಲವಾಗಲಿದೆ. ಅವರು ಮೊದಲಿನಂತೆ ಪಕ್ಷದಲ್ಲಿ ಕೆಲಸ ಮಾಡುತ್ತಾರೆ. ಪಕ್ಷಕ್ಕೆ ಶಕ್ತಿ ತುಂಬುತ್ತಾರೆ. ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಬಂದಿದ್ದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಶೆಟ್ಟರ್ ಬಿಜೆಪಿ ವಾಪಸ್ : ಮಂಗಲ ಅಂಗಡಿ ಮನೆಯಲ್ಲಿ ಸಂಭ್ರಮ