ಬೆಂಗಳೂರು: ನೋಂದಣಿ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಹಾಗೂ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಆಗಸ್ಟ್ ತಿಂಗಳಿನಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.
''ಉಪ ನೋಂದಣಾಧಿಕಾರಿ ಕಚೇರಿ ಎಂದರೆ ಜನದಟ್ಟಣೆ ಸಾಮಾನ್ಯ ಎಂಬ ಪರಿಸ್ಥಿತಿ ಇದೆ. ಜನಸಾಮಾನ್ಯರನ್ನು ಸರಕಾರಿ ಕಚೇರಿಗಳಲ್ಲಿ ಕಾಯಿಸುವುದೂ ಒಂದು ರೀತಿಯ ಶೋಷಣೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಈಗಾಗಲೇ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಈ ವ್ಯವಸ್ಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಆಗಸ್ಟ್ ತಿಂಗಳಿನಿಂದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು'' ಎಂದರು.
''ಪ್ರಾಯೋಗಿಕವಾಗಿ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇದೇ ವರ್ಷ ಮಾರ್ಚ್ 14ರಿಂದ ಈ ವ್ಯವಸ್ಥೆಯನ್ನು ಪರಿಚಯಿಸಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ ಮುಂದಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ತಲಾ 4 ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿ. ನಂತರದ ತಿಂಗಳಲ್ಲಿ ಈ ಸಂಖ್ಯೆಯನ್ನು 8ಕ್ಕೇರಿಸಿ. ಈ ವರ್ಷಾಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಎನಿವೇರ್ ರಿಜಿಸ್ಟ್ರೇಷನ್ ಲಭ್ಯವಾಗುವಂತೆ ನೋಡಿಕೊಳ್ಳಿ'' ಎಂದು ತಿಳಿಸಿದರು.
ಏನಿವೇರ್ ರಿಜಿಸ್ಟ್ರೇಷನ್ ಎಂದರೇನು?: ವ್ಯಕ್ತಿ ತನ್ನ ಜಿಲ್ಲಾ ವ್ಯಾಪ್ತಿಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆಯೇ ಎನಿವೇರ್ ರಿಜಿಸ್ಟ್ರೇಷನ್.
ಅನುಕೂಲವೇನು?: ದಸ್ತಾವೇಜುಗಳ ನೋಂದಣಿಗಳ ವಿಳಂಬ ತಡೆಗಟ್ಟಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸುವ, ಸಬ್ ರಿಜಿಸ್ಟ್ರಾರ್ ಕಚೇರಿಯೆದುರು ಜನರು ಕಾಯುವುದರಿಂದ ಮುಕ್ತಿ ನೀಡುವ ಹಾಗೂ ಕಚೇರಿ ಸಿಬ್ಬಂದಿ ಮೇಲೆ ಕೆಲಸದೊತ್ತಡ ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ.
ಪ್ರಾಯೋಗಿಕವಾಗಿ ಮೊದಲು ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಜಿಲ್ಲಾ ನೋಂದಣಿ ಕಚೇರಿಯ ವ್ಯಾಪ್ತಿಯ ಉಪನೋಂದಣಿ ಕಚೇರಿಗಳಲ್ಲಿ ಜಾರಿಗೆ ತರಲಾಗಿತ್ತು. ಆಸ್ತಿ ನೋಂದಣಿ ಸಮಯದಲ್ಲಿ ಜನಸಾಮಾನ್ಯರು ಬೆಂಗಳೂರು ನಗರದ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿತ್ತು.
''ಎನಿವೇರ್ ನೋಂದಣಿ ವ್ಯವಸ್ಥೆಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜನಸಾಮಾನ್ಯರಿಗೆ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ನೀಡಲು ಈ ಯೋಜನೆ ಸಹಕಾರಿಯಾಗಿದೆ. ಜನರೂ ಇದರ ಉಪಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ'' ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಭಾರ ಮಹಾ ನಿರೀಕ್ಷಕ ದಯಾನಂದ ಕೆ.ಎ. ಇದ್ದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ಕುರಿತ ಚರ್ಚೆ: ಆಡಳಿತ ಪಕ್ಷದ ಜೊತೆ ಸ್ವಪಕ್ಷೀಯರಿಗೂ ತಿವಿದ ಯತ್ನಾಳ್ - valmiki corporation scam